ಉದಯವಾಹಿನಿ, ಸ್ಯಾಂಟಿಯಾಗೋ(ಚಿಲಿ): ಲಿಕ್ವಿಡ್ ಗ್ಯಾಸ್ (ದ್ರವ ಅನಿಲ) ಸಾಗಿಸುತ್ತಿದ್ದ ಟ್ರಕ್ ವೊಂದು ಪಲ್ಟಿಯಾಗಿ ಬಿದ್ದು ಸ್ಪೋಟಗೊಂಡ ಪರಿಣಾಮ ನಾಲ್ವರು ಸಜೀವವಾಗಿ ದಹನಗೊಂಡ ಘಟನೆ ಚಿಲಿ ರಾಜಧಾನಿ ಸ್ಯಾಂಟಿಯಾಗೋದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಟ್ರಕ್ ಚಾಲಕ ಅತೀ ವೇಗದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡಿರುವುದಾಗಿ ತಿಳಿಸಿದ್ದಾರೆ.
ಭೀಕರ ಘಟನೆಯಲ್ಲಿ ಟ್ರಕ್ ಚಾಲಕ ಹಾಗೂ ಇತರ ಮೂವರು ಮಂದಿ ಜೀವಂತವಾಗಿ ಸುಟ್ಟುಹೋಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಗ್ಗೆ ಪ್ರಾಸಿಕ್ಯೂಟರ್ಸ್ ಕಚೇರಿ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ.
ಈ ಟ್ರಕ್ ಸ್ಥಳೀಯ ಗ್ಯಾಸ್ಕೋ ಗ್ಯಾಸ್ ಕಂಪನಿಗೆ ಸೇರಿದ್ದಾಗಿದೆ. ಘಟನೆ ಕುರಿತು ಗ್ಯಾಸ್ಕೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ತಿಳಿಸಿದೆ. ದ್ರವ ಅನಿಲ ಸಾಗಿಸುತ್ತಿದ್ದ ಟ್ರಕ್ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಕ್ವಿಡ್ ಗ್ಯಾಸ್ ಟ್ರಕ್ ಪಲ್ಟಿ ಹೊಡೆದ ಪರಿಣಾಮ ಸುಮಾರು 50 ವಾಹನಗಳು ಜಖಂಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ಅಗ್ನಿಶಾಮಕ ದಳದ ಸಿಬಂದಿಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
