ಉದಯವಾಹಿನಿ, ಕಾಬೂಲ್: ಕಳೆದ ಕೆಲ ವರ್ಷಗಳಿಂದಲೂ ಹೆಣ್ಣುಮಕ್ಕಳ ಸ್ವಾತಂತ್ರ್ಯ ಹರಣ ಮಾಡಿ, ವಿಧ ವಿಧವಾಗಿ ಅವರನ್ನು ಹಿಂಸಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಇದೀಗ ಮತ್ತೆ ತನ್ನ ವಿಲಕ್ಷಣ ನೀತಿಯಿಂದ ಸುದ್ದಿಯಾಗಿದೆ.
ಹೌದು, ಈ ಹಿಂದೆ ಹೆಣ್ಣುಮಕ್ಕಳು ಹಾಡು ಹಾಡುವಂತಿಲ್ಲ, ಶಿಕ್ಷಣ ಪಡೆಯುವಂತಿಲ್ಲ, ಸಾರ್ವಜನಿಕವಾಗಿ ಒಂಟಿಯಾಗಿ ಕಾಣಿಸಿಕೊಳ್ಳುವಂತಿಲ್ಲ ಎಂಬೆಲ್ಲ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವ ತಾಲಿಬಾನ್ ಆಡಳಿತವು, ಇದೀಗ ಕೌಟುಂಬಿಕ ಹಿಂಸಾಚಾರವನ್ನು ಕಾನೂನುಬದ್ಧಗೊಳಿಸಿದೆ.
ತಾಲಿಬಾನ್‌ನ ಸರ್ವೋಚ್ಛ ನಾಯಕ ಹಿಬಾತುಲ್ಲಾ ಅಖುಂಡ್ಡಾದಾ ಸಹಿ ಹಾಕಿರುವ 90 ಪುಟಗಳ ಹೊಸ ಅಪರಾಧ ಸಂಹಿತೆ ಪ್ರಕಾರ, ಪುರುಷರು ತಮ್ಮ ಪತ್ನಿ ಹಾಗೂ ಮಕ್ಕಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಬಹುದು. ಆದರೆ ಅವರ ಮೂಳೆ ಮುರಿಯದಂತೆ ಹಾಗೂ ಗಾಯಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಒಂದು ವೇಳೆ ಅಂತಹ ಗಾಯಗಳು, ಮೂಳೆ ಮುರಿತ ಆದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ, ಈ ಅಪರಾಧಿಗಳನ್ನು ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಧಾರ್ಮಿಕ ವಿದ್ವಾಂಸರು, ಅಶ್ರಫ್ ಅಥವಾ ಗಣ್ಯ, ಮಧ್ಯಮ ವರ್ಗ ಮತ್ತು ಕೆಳವರ್ಗ ಎಂದು ವಿಂಗಡಿಸಲಾಗಿದೆ. ಆರೋಪಿಯು ಯಾವ ವರ್ಗಕ್ಕೆ ಸೇರಿದವನೆಂಬುದನ್ನು ಅವಲಂಬಿಸಿ ಒಂದೇ ಅಪರಾಧಕ್ಕೆ ಶಿಕ್ಷೆ ಬದಲಾಗುತ್ತದೆ. ಧಾರ್ಮಿಕ ವಿದ್ವಾಂಸರು ಮತ್ತು ಗಣ್ಯರಿಗೆ ಕೇವಲ ಸಲಹೆ ನೀಡಿದರೆ, ಮಧ್ಯಮ, ಕೆಳವರ್ಗದ ಜನರಿಗೆ ಗರಿಷ್ಠ 15 ದಿನಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
