
ಉದಯವಾಹಿನಿ, ಸಿಯೋಲ್(ದಕ್ಷಿಣ ಕೊರಿಯಾ): 2024ರ ಡಿಸೆಂಬರ್ ನಲ್ಲಿ ದೇಶದಲ್ಲಿ ಸೇನಾಡಳಿತವನ್ನು ಜಾರಿಗೊಳಿಸಲು ವಿಫಲವಾದ ಆರೋಪದಡಿ ದಕ್ಷಿಣ ಕೊರಿಯಾ ನ್ಯಾಯಾಲಯ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರಿಗೆ ಕಠಿನ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.
ದಕ್ಷಿಣ ಕೊರಿಯಾದಲ್ಲಿ ದಂಗೆಯನ್ನು ಹತ್ತಿಕ್ಕಲು ವಿಫಲವಾದ ಪ್ರಕರಣದಲ್ಲಿ ಯೂನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಯೂನ್ ಗರಿಷ್ಠ ಶಿಕ್ಷೆಗೆ ಒಳಗಾದ ದಕ್ಷಿಣ ಕೊರಿಯಾದ ಮೊದಲ ಮಾಜಿ ಅಧ್ಯಕ್ಷರಾಗಿರುವುದಾಗಿ ವರದಿ ವಿವರಿಸಿದೆ.
ದಂಗೆಗೆ ಪ್ರಚೋದನೆ ನೀಡುವುದು ದಕ್ಷಿಣ ಕೊರಿಯಾ ಕಾನೂನು ಪ್ರಕಾರ, ಮೂರು ವಿಧದ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ದಂಗೆಗೆ ಕುಮ್ಮಕ್ಕು ನೀಡಿದ ಆರೋಪ ಸಾಬೀತಾದಲ್ಲಿ ಆರೋಪಿಗೆ ಮರಣ ದಂಡನೆ, ಕಠಿನ ಜೀವಾವಧಿ ಶಿಕ್ಷೆ ಅಥವಾ ಸಾದಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. 2024ರಲ್ಲಿ ದೇಶದಲ್ಲಿ ಸುಮಾರು ಆರು ಗಂಟೆಗಳ ಕಾಲ ನಡೆದ ಪ್ರತಿಭಟನೆ, ದಂಗೆಯಲ್ಲಿ ಜನರು ಸಂಸತ್ ಅನ್ನು ಸುತ್ತುವರಿದು ವಿಪಕ್ಷ ನಾಯಕರನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದು, ಇದನ್ನು ತಡೆಯಲು ವಿಫಲರಾದ ಯೂನ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್ಸ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.
ಕೋರ್ಟ್ ವಿಚಾರಣೆ ವೇಳೆ ಮಾಜಿ ಅಧ್ಯಕ್ಷ ಯೂನ್ ಅವರು ತಾನೇನು ತಪ್ಪು ಎಸಗಿಲ್ಲ, ಈ ವಿಚಾರಣೆ ರಾಜಕೀಯ ಸಂಚು ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಯೂನ್ ಸುಕ್ ಅವರ ವಿರುದ್ಧದ ದೋಷಾರೋಪಣೆ ಮತ್ತು ರಾಜಕೀಯ ಬಿಕ್ಕಟ್ಟಿನ ನಂತರ ನಡೆದ ಚುನಾವಣೆಯಲ್ಲಿ (2025 ಜೂನ್) ಲೀ ಜೆ ಮಯುಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
