ಉದಯವಾಹಿನಿ, ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾಗೆ ವಿದೇಶ ಪ್ರಯಾಣಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದು, 1 ಲಕ್ಷ ರೂಪಾಯಿಗಳ ಶೂರಿಟಿಯನ್ನು ಸಲ್ಲಿಸಲು ಮತ್ತು ನ್ಯಾಯಾಲಯದ ಪೂರ್ವಾನುಮತಿ ಪಡೆಯಲು ಆದೇಶಿಸಿದೆ.
150 ಕೋಟಿ ರೂಪಾಯಿಗಳ ಬಿಟ್ಕಾಯಿನ್ ಹಗರಣದ ಆರೋಪಿಯಾಗಿರುವ ರಾಜ್ ಕುಂದ್ರಾ ಅವರಿಗೆ ಶುಕ್ರವಾರ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ.
ಜಾರಿ ನಿರ್ದೇಶನಾಲಯವು ಅಕ್ರಮಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಇವರ ವಿರುದ್ಧ ಜನವರಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಆ ಬಳಿಕ ಅವರು ನ್ಯಾಯಾಲಯದ ಮುಂದೆ ಹಾಜರಾದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ ಕುಂದ್ರಾ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆ. ಇದಕ್ಕಾಗಿ ನ್ಯಾಯಾಲಯಕ್ಕೆ 1 ಲಕ್ಷ ರೂಪಾಯಿಗಳ ಶೂರಿಟಿಯನ್ನು ನೀಡಬೇಕು ಮತ್ತು ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕು ಎಂದು ನಿರ್ದೇಶಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ಕುಂದ್ರಾ, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಹೆಂಡತಿ ಮನೆಯಲ್ಲಿ ಮಾತನಾಡಲು ಬಿಡುವುದಿಲ್ಲ ಮತ್ತು ನನ್ನ ವಕೀಲರು ನ್ಯಾಯಾಲಯದಲ್ಲಿ ಮಾತನಾಡಲು ಬಿಡುವುದಿಲ್ಲ ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯನ್ನು ಆಧರಿಸಿ ವಿಶೇಷ ನ್ಯಾಯಾಲಯವು ರಾಜ್ ಕುಂದ್ರಾ ಮತ್ತು ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ರಾಜ್ ಕುಂದ್ರಾ ಮತ್ತು ಸತಿಜಾ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!