ಉದಯವಾಹಿನಿ, ಅಹಮದಾಬಾದ್‌: ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌(T20 World Cup)ನ ಅಜೇಯ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ತಂಡ ಭಾನುವಾರ ನಡೆಯುವ ಸೂಪರ್‌-8 ಪಂದ್ಯದಲ್ಲಿ ಮುಖಾಮುಖಿಯಾಲಿವೆ. ಸಹಜವಾಗಿಯೇ ಒಂದು ತಂಡ ಮೊದಲ ಸೋಲು ಕಾಣಲಿದೆ. ಈ ತಂಡ ಯಾವುದು ಎಂಬುದು ಪಂದ್ಯದ ಕೌತುಕ. ಪಂದ್ಯಕ್ಕೆ ಮೋದಿ ಕ್ರೀಡಾಂಗಣ ಅಣಿಯಾಗಿದೆ.
ತನ್ನದೇ ಆತಿಥ್ಯದಲ್ಲಿ ವಿಶ್ವಕಪ್‌ ನಡೆಯುತ್ತಿದ್ದರೂ ಭಾರತ ತಂಡ ಈಗಲೂ ಟೂರ್ನಿಗೆ ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ. ಲೀಗ್‌ ಹಂತದ ಎಲ್ಲ ಪಂದ್ಯವನ್ನೂ ಗೆದ್ದಿದ್ದರೂ ಕೂಡ ಬಲಿಷ್ಠ ತಂಡಗಳ ಸವಾಲು ಇನ್ನಷ್ಟೇ ಎದುರಿಸಬೇಕಿದೆ. ನೆದರ್ಲೆಂಡ್ಸ್‌ ವಿರುದ್ಧ ಸೋಲಿನ ಅಂಚಿನ ತನಕ ಹೋಗಿ ಕೊನೆಗೆ ಸಣ್ಣ ಅಂತರದ ಗೆಲುವಿನ ನಿಟ್ಟುಸಿರು ಬಿಟ್ಟಿದ್ದನ್ನು ಮರೆಯುವಂತಿಲ್ಲ. ತಂಡದ ಬೌಲಿಂಗ್‌ ಸುಧಾರಣೆ ಕಾಣದ ಹೊರತು ತಂಡ ಮುಂದಿನ ಹಂತ ಕಷ್ಟವಿದೆ.

ಹೊರನೋಟಕ್ಕೆ ತಂಡ ಸಮರ್ಥವಾಗಿ, ಕಾಣಿಸಿದರೂ ತಂಡದಲ್ಲಿ ಸಮಸ್ಯೆ ಇಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮ ಹ್ಯಾಟ್ರಿಕ್‌ ಶೂನ್ಯ ಸುತ್ತಿದ್ದಾರೆ. ಅನುಭವಿ ಬೌಲರ್‌ ಜಸ್‌ಪ್ರೀತ್‌ ಬುಮ್ರಾ, ಅರ್ಶ್‌ದೀಪ್‌ ಸಿಂಗ್‌ ಇದುವರೆಗೂ ಪರಿಣಾಮಕಾರಿ ಬೌಲಿಂಗ್‌ ನಡೆಸಿಲ್ಲ. ತಿಲಕ್‌ ವರ್ಮ ಬ್ಯಾಟ್‌ ಕೂಡ ಸದ್ದು ಮಾಡುತ್ತಿಲ್ಲ. ಸದ್ಯ ಇಶಾನ್‌ ಕಿಶನ್‌ ಮಾತ್ರ ನಂಬಿಕಸ್ಥ ಬ್ಯಾಟರ್‌ ಆಗಿದ್ದಾರೆ. ಸೂಪರ್ 8 ಹಂತದ ಪ್ರತಿ ಗುಂಪಿನಲ್ಲಿ ತಂಡವೊಂದು ಕನಿಷ್ಠ ಎರಡು ಗೆಲುವು ದಾಖಲಿಸಿದರೆ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸೂಪರ್-8 ಹಂತದ ಪ್ರತಿ ಪಂದ್ಯವು ಎಲ್ಲಾ ತಂಡಗಳಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!