ಉದಯವಾಹಿನಿ, ಇಸ್ಲಾಮಾಬಾದ್(ಪಾಕಿಸ್ತಾನ)​: ಇತ್ತೀಚಿನ ಆತ್ಮಹತ್ಯಾ ದಾಳಿಗಳಿಗೆ ಕಾರಣವಾಗಿರುವ ಉಗ್ರರ ಗುಂಪುಗಳನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನ ಗಡಿ ಪ್ರದೇಶದ ಏಳು ಸ್ಥಳಗಳ ಮೇಲೆ ಭಾನುವಾರ ದಾಳಿ ನಡೆಸಿದ್ದೇವೆ ಎಂದು ಪಾಕಿಸ್ತಾನ ತಿಳಿಸಿದೆ.
ಕಳೆದ ವಾರ ರಂಜಾನ್ ಆರಂಭವಾದಾಗಿನಿಂದ ಮೂರು ದಾಳಿಗಳನ್ನು ಉಲ್ಲೇಖಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, “ಪಾಕಿಸ್ತಾನವು ಗುಪ್ತಚರ ಮಾಹಿತಿ ಆಧಾರಿತ ಏಳು ಭಯೋತ್ಪಾದಕ ಶಿಬಿರಗಳು ಮತ್ತು ಪಾಕಿಸ್ತಾನಿ ತಾಲಿಬಾನ್‌ಗೆ ಸೇರಿದ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಗಡಿ ಪ್ರದೇಶದಲ್ಲಿನ ಅದರ ಅಂಗಸಂಸ್ಥೆಗಳ ಮೇಲೆ ದಾಳಿ ನಡೆಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ದಾಳಿ ಬಗ್ಗೆ ಅಫ್ಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಭಾನುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನವು “ನಂಗರ್‌ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ನಮ್ಮ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್​ಗಟ್ಟಲೆ ಜನರನ್ನು ಹತ್ಯೆ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎರಡು ವಾರಗಳ ಹಿಂದೆ ಇಸ್ಲಾಮಾಬಾದ್‌ನ ಶಿಯಾ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಶನಿವಾರ ನಡೆದ ಒಂದು ದಾಳಿ ಸೇರಿದಂತೆ ವಾಯುವ್ಯ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಇತರ ಆತ್ಮಹತ್ಯಾ ಬಾಂಬ್​ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಪಾಕಿಸ್ತಾನ ಸಚಿವಾಲಯ ತಿಳಿಸಿದೆ.
2008ರ ಮ್ಯಾರಿಯಟ್ ಹೋಟೆಲ್ ಬಾಂಬ್ ದಾಳಿಯ ನಂತರ ಇಸ್ಲಾಮಾಬಾದ್ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿ 160ಕ್ಕೂ ಹೆಚ್ಚು ಜನರು ಗಾಯಗೊಂಡ ಮಸೀದಿ ಬಾಂಬ್ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿತ್ತು. ಇಸ್ಲಾಮಾಬಾದ್ ಪದೇ ಪದೇ ಒತ್ತಾಯಿಸಿದರೂ, ಕಾಬೂಲ್‌ನ ತಾಲಿಬಾನ್ ಅಧಿಕಾರಿಗಳು ಪಾಕಿಸ್ತಾನದಲ್ಲಿ ದಾಳಿ ನಡೆಸಲು ಅಫ್ಘಾನ್ ಪ್ರದೇಶವನ್ನು ಬಳಸುವ ಉಗ್ರರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಪಾಕಿಸ್ತಾನ ಭಾನುವಾರ ಹೇಳಿದೆ.
ಅಲ್ಲದೇ, ಪಾಕಿಸ್ತಾನವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಯಾವಾಗಲೂ ಶ್ರಮಿಸುತ್ತಿದೆ, ಆದರೆ ಅದೇ ಸಮಯದಲ್ಲಿ ನಮ್ಮ ನಾಗರಿಕರ ಸುರಕ್ಷತೆ ಮತ್ತು ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅದು ಹೇಳಿದೆ.

ಕಳೆದ ವರ್ಷ ದೋಹಾ ಒಪ್ಪಂದದ ಅಡಿಯಲ್ಲಿ ಇತರ ದೇಶಗಳ ವಿರುದ್ಧ ಪ್ರತಿಕೂಲ ಕ್ರಮಗಳನ್ನು ಬೆಂಬಲಿಸದಂತೆ ಕಾಬೂಲ್ ತನ್ನ ಬದ್ಧತೆಗಳನ್ನು ಪೂರೈಸುವಂತೆ ಒತ್ತಾಯಿಸಲು ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ಸಮುದಾಯವನ್ನು ಕೋರಿದೆ. 2021ರಲ್ಲಿ ತಾಲಿಬಾನ್ ಅಧಿಕಾರಿಗಳು ಕಾಬೂಲ್‌ನಲ್ಲಿ ನಿಯಂತ್ರಣ ಪಡೆದಾಗಿನಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳು ಇಂತಹ ವಿವಾದದಲ್ಲಿ ಸಿಲುಕಿಕೊಂಡಿವೆ.

ಇತ್ತೀಚಿನ ತಿಂಗಳುಗಳಲ್ಲಿ ಗಡಿ ಘರ್ಷಣೆಗಳೊಂದಿಗೆ ಎರಡೂ ದೇಶಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದೊಂದಿಗೆ ಕೊನೆಗೊಂಡ ಅಕ್ಟೋಬರ್ ಘರ್ಷಣೆಗಳಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡರು. ಆದರೆ ದೋಹಾ ಮತ್ತು ಇಸ್ತಾನ್‌ಬುಲ್‌ನಲ್ಲಿ ನಡೆದ ಹಲವಾರು ನಂತರದ ಸುತ್ತಿನ ಮಾತುಕತೆಗಳು ಶಾಶ್ವತ ಒಪ್ಪಂದವನ್ನು ರೂಪಿಸುವಲ್ಲಿ ವಿಫಲವಾಗಿವೆ. ನಮ್ಮ ಮೇಲೆ ದಾಳಿ ನಡೆಸುವ ಉಗ್ರರ ಗುಂಪುಗಳಿಗೆ, ವಿಶೇಷವಾಗಿ ತಾಲಿಬಾನ್‌ಗೆ ಆಶ್ರಯ ನೀಡುತ್ತಿದೆ ಎಂದು ಪಾಕ್ ಆರೋಪಿಸಿದೆ. ಆದರೆ ಇದನ್ನು ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರ ಅಲ್ಲಗಳೆದಿದೆ.

Leave a Reply

Your email address will not be published. Required fields are marked *

error: Content is protected !!