ಉದಯವಾಹಿನಿ, ಬೆಂಗಳೂರು: ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳಿಗೆ, ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ 7 ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ವನ್ಯಜೀವಿ -ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲೀಕರ ವಾಟ್ಸಾಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡುವಂತೆ ಸೂಚಿಸಿದರು.
ಮಾನವ ಜೀವ ಅತ್ಯಮೂಲ್ಯವಾದ್ದು. ಒಂದು ಜೀವಹಾನಿ ಆದ ಬಳಿಕ ಮತ್ತೊಂದು ಜೀವಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24*7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸರೆ ಕಾರ್ಯಾಚರಣೆ ನಡೆಸಬೇಕು. ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಸೂಚಿಸಿದರು.
ಚಿಕ್ಕಮಗಳೂರಿನಲ್ಲಿ ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ, ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಕ್ಕೆ ಹೋಗದಂತೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
