ಇಸ್ಲಾಮಾಬಾದ್ (ಪಾಕಿಸ್ತಾನ): ಅಫ್ಘಾನಿಸ್ತಾನ ರಾಷ್ಟ್ರದ ನಂಗರ್‌ಹಾರ್​, ಪಕ್ತಿಕಾ ಮತ್ತು ಖೋಸ್ಟ್​ ಪ್ರಾಂತ್ಯಗಳ ಏಳು ಸ್ಥಳಗಳಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಾಬಾದ್​ನ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಇತ್ತೀಚಿನ ಆತ್ಮಹತ್ಯಾ ದಾಳಿಗಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ದಾಳಿಗಳನ್ನು ನಡೆಸಿದೆ. ಗುರಿಯಾಗಿಸಿಕೊಂಡ ಸ್ಥಳಗಳಲ್ಲಿ ನಂಗರ್‌ಹಾರ್‌ನಲ್ಲಿ ಕೇಂದ್ರ ಸಂಖ್ಯೆ 1 ಮತ್ತು ಕೇಂದ್ರ ಸಂಖ್ಯೆ 2, ಖೋಸ್ಟ್​ನಲ್ಲಿ ಖ್ವಾರಿಜಿ ಮೌಲ್ವಿ ಅಬ್ಬಾಸ್​ ಕೇಂದ್ರ, ನಂಗರ್‌ಹಾರ್‌ನಲ್ಲಿರುವ ಖ್ವಾರಿಜಿ ಇಸ್ಲಾಂ ಕೇಂದ್ರ, ಖ್ವಾರಿಜಿ ಇಬ್ರಾಹಿಂ ಕೇಂದ್ರ, ಪಕ್ತಿಕಾದಲ್ಲಿ ಖ್ವಾರಿಜಿ ಮುಲ್ಲಾ ರಹಬರ್ ಮತ್ತು ಖ್ವಾರಿಜಿ ಮುಖ್ಲಿಸ್ ಯಾರ್​ ಸೇರಿವೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಪಾಕಿಸ್ತಾನದ ಗೃಹ ಖಾತೆ ರಾಜ್ಯ ಸಚಿವ ತಲಾಲ್​ ಚೌಧರಿ, “ಗಡಿಯಾಚೆಗಿನ ಕಾರ್ಯಾಚರಣೆಯಲ್ಲಿ ಸುಮಾರು 70 ಉಗ್ರರನ್ನು ಎನ್​​​​ಕೌಂಟರ್​ ಮಾಡಲಾಗಿದೆ ಎಂದು ಹೇಳಿದ್ದರು. ನಿಷೇಧಿತ ತೆಹ್ರೀಕ್ – ಎ – ತಾಲಿಬಾನ್ ಪಾಕಿಸ್ತಾನ, ಅದರ ಅಂಗಸಂಸ್ಥೆಗಳು ಮತ್ತು ಇಸ್ಲಾಮಿಕ್ ಸ್ಟೇಟ್ – ಖೊರಾಸನ್ ಪ್ರಾಂತ್ಯದ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

ಅಂತಾರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಚೌಧರಿ, “ಅಫ್ಘಾನಿಸ್ತಾನವು ಗಡಿಯಾಚೆಗಿನ ಉಗ್ರಗಾಮಿಗಳ ಮೂಲವಾಗಿದೆ. ಪಾಕಿಸ್ತಾನ ತನ್ನ ನಾಗರಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮತ್ತು ಸುಮಾರು 70,000 ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ದೇಶೀಯವಾಗಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಹಲವಾರು ಬಂಧನಗಳು ನಡೆದಿವೆ” ಎಂದು ತಿಳಿಸಿದ್ದಾರೆ.

ಇನ್ನು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದಾಳಿಗಳನ್ನು ನಿಖರ ಎಂದು ಬಣ್ಣಿಸಿದೆ. ಇದು ಇಸ್ಲಾಮಾಬಾದ್​​ ಬಜೌರ್​ ಮತ್ತು ಬನ್ನುದಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಗಳಿಗೆ ಪ್ರತೀಕಾರವಾಗಿ ನಡೆದ ಕಾರ್ಯಾಚರಣೆ ಎಂದು ಕರೆದಿದೆ. ಪಾಕಿಸ್ತಾನದ ದಾಳಿಗಳು ಪಕ್ತಿಕಾ ಪ್ರಾಂತ್ಯದ ಬರ್ಮಲ್ ಪ್ರದೇಶ, ನಂಗರ್ಹಾರ್ ಪ್ರಾಂತ್ಯದ ಖೋಗ್ಯಾನಿ ಜಿಲ್ಲೆ, ಹಾಗೂ ಘನಿ ಖೇಲ್, ಬೆಹ್ಸುದ್ ಮತ್ತು ಅರ್ಗೂನ್ ಪ್ರದೇಶಗಳ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗಿದೆ.

ಸಚಿವ ಚೌಧರಿ 2020ರ ದೋಹಾ ಒಪ್ಪಂದವನ್ನು ಉಲ್ಲೇಖಿಸಿ, ಅಫ್ಘಾನ್​ ತಾಲಿಬಾನ್ ತನ್ನ ಮಣ್ಣನ್ನು ಭಯೋತ್ಪಾದನೆಗೆ ಬಳಸುವುದನ್ನು ಅನುಮತಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿತ್ತು ಎಂದು ನೆನಪಿಸಿದ್ದಾರೆ. ಕಾಬೂಲ್​ನ ಮಧ್ಯಂತರ ಆಡಳಿತವು ಉಗ್ರಗಾಮಿ ಚಟುವಟಿಕೆಯನ್ನು ನಿಗ್ರಹಿಸಲು ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನವು ತನ್ನ ಭದ್ರತಾ ಕಾಳಜಿಗಳನ್ನು ಪರಿಹರಿಸಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಪ್ರಯತ್ನಗಳನ್ನು ಮಾಡಿದೆ ಮತ್ತು ಭಯೋತ್ಪಾದನೆಯ ವಿರುದ್ಧ ಒಂದಾಗಲು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದೆ ಎಂದು ದೇಶದ ಕ್ರಮವನ್ನು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!