ಉದಯವಾಹಿನಿ, ದುಬೈ: ಇಸ್ಲಾಮಿಕ್ ಗಣರಾಜ್ಯ ಇರಾನ್​, ಅಮೆರಿಕದ ಮಿಲಿಟರಿ ಕ್ರಮದ ಬೆದರಿಕೆ ನಡುವೆ ಹೊಸ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಈ ನಡುವೆ ಅಮೆರಿಕ ಮತ್ತು ಇರಾನ್ ಗುರುವಾರ ಜಿನೀವಾದಲ್ಲಿ ತಮ್ಮ ಮುಂದಿನ ಸುತ್ತಿನ ಪರಮಾಣು ಮಾತುಕತೆಗಳನ್ನು ನಡೆಸಲಿವೆ ಎಂದು ತಿಳಿದು ಬಂದಿದೆ.ಒಮಾನ್‌ನ ವಿದೇಶಾಂಗ ಸಚಿವ ಬದ್ರ್ ಅಲ್-ಬುಸೈದಿ ಈ ಮಾತುಕತೆಗಳನ್ನು ದೃಢಪಡಿಸಿದ್ದಾರೆ. ಓಮನ್ ಈ ಹಿಂದೆ ಇರಾನ್​ನ ಪರಮಾಣು ಕಾರ್ಯಕ್ರಮಗಳ ಕುರಿತು ಪರೋಕ್ಷ ಮಾತುಕತೆಗಳನ್ನು ಆಯೋಜಿಸಿತ್ತು. ಕಳೆದ ವಾರ ಜಿನೀವಾದಲ್ಲಿ ಇತ್ತೀಚಿನ ಮಾತುಕತೆಗಳಿಗೆ ವೇದಿಕೆ ಕಲ್ಪಿಸಿತ್ತು.

ಆದರೆ, ಟ್ರಂಪ್ ಆಡಳಿತದಿಂದ ತಕ್ಷಣಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ದಶಕಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮಿಲಿಟರಿಯನ್ನು ನಿಯೋಜಿಸಿದೆ. ಈ ಮೂಲಕ ಪರಮಾಣು ಕಾರ್ಯಕ್ರಮಗಳನ್ನು ತ್ಯಜಿಸುವಂತೆ ಇರಾನ್​ ಮೇಲೆ ಅಮೆರಿಕ ಒತ್ತ ಹೇರುತ್ತಿದೆ. ಹೀಗಾಗಿ ಯುದ್ಧದ ಕಾರ್ಮೋಡ ಕಾಣಿಸಿಕೊಳ್ಳುತ್ತಿದೆ.

ಈ ನಡುವೆ ಇರಾನ್‌ನ ಉನ್ನತ ರಾಜತಾಂತ್ರಿಕ ಅಬ್ಬಾಸ್ ಅರಘ್ಚಿ, ಗುರುವಾರ ಜಿನೀವಾದಲ್ಲಿ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಸಿಬಿಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪರಮಾಣು ಸಮಸ್ಯೆಗಳ ಕುರಿತು ರಾಜತಾಂತ್ರಿಕ ಪರಿಹಾರಕ್ಕೆ ಒಳ್ಳೆಯ ಅವಕಾಶ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಕೆಲವು ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲು ಸಿದ್ಧ ಎಂದು ಅರಘ್ಚಿ ಹೇಳಿದ್ದಾರೆ. ಈ ಪ್ರಸ್ತಾವಿತ ಒಪ್ಪಂದಕ್ಕಾಗಿ ವಾಷಿಂಗ್ಟನ್ ಕಾಯುತ್ತಿದೆ ಮತ್ತು ಇರಾನ್ ಇನ್ನೂ ಈ ಬಗೆಗಿನ ಕರಡು ಪ್ರಸ್ತಾವನೆಯ ಮೇಲೆ ಕೆಲಸ ಮಾಡುತ್ತಿದೆ ಎಂದು ವಿದೇಶಾಂಗ ಸಚಿವರು ಸಿಬಿಎಸ್‌ಗೆ ತಿಳಿಸಿದ್ದಾರೆ.

ಶುಕ್ರವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಸೀಮಿತ ದಾಳಿಗಳನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ. ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ವಿಫಲವಾದರೆ, ಇರಾನ್ ಮತ್ತು ಅಮೆರಿಕ ಯುದ್ದಕ್ಕೂ ಸಿದ್ಧವಾಗಿವೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಹಾಗೆಯೇ ಮುಂದುವರೆದಿದೆ. ಓಮನ್ ಮಾತುಕತೆಗಳನ್ನು ದೃಢಪಡಿಸಿದ ಕೆಲವೇ ನಿಮಿಷಗಳ ನಂತರ ಇದಕ್ಕೆ ಇರಾನ್​ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ. ಮಾತುಕತೆಗಳು ಪ್ರಾಯೋಗಿಕ ಪ್ರಸ್ತಾಪಗಳ ವಿನಿಮಯವನ್ನು ಒಳಗೊಂಡಿವೆ ಮತ್ತು ಪ್ರೋತ್ಸಾಹದಾಯಕ ಸಂಕೇತಗಳನ್ನು ನೀಡಿವೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸಾಮಾಜಿಕ ಮಾಧ್ಯಮದ ಮೂಲಕ ಹೇಳಿದ್ದಾರೆ. ಇದೇ ವೇಳೆ, ಟೆಹ್ರಾನ್ ಯಾವುದೇ ಸಂಭಾವ್ಯ ಸನ್ನಿವೇಶಗಳನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!