ಉದಯವಾಹಿನಿ, ಬ್ರಸೆಲ್ಸ್, ಬೆಲ್ಜಿಯಂ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ವ್ಯಾಪಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ, ಯುರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ವಿಭಾಗ ಪ್ರತಿಕ್ರಿಯೆ ನೀಡಿದೆ ಹಾಗೂ ಅಮೆರಿಕದಿಂದ ಪೂರ್ಣ ಸ್ಪಷ್ಟತೆಯನ್ನೂ ಕೂಡಾ ಕೋರಿದೆ. ಜೊತೆಗೆ ವ್ಯಾಪಾರ ಪಾಲುದಾರನು ತನ್ನ ಬದ್ಧತೆಗಳನ್ನು ಪೂರೈಸುವಂತೆ ಒತ್ತಾಯಿಸಿದೆ.
2025ರ ಆಗಸ್ಟ್ನಲ್ಲಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ನಡೆಸಿದ ಜಂಟಿ ಹೇಳಿಕೆ ಹಾಗೂ ಇಬ್ಬರು ಒಪ್ಪಿದಂತೆ ನ್ಯಾಯಯುತ, ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ಟ್ರಾನ್ಸ್- ಅಟ್ಲಾಂಟಿಕ್ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಸದ್ಯದ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಯುರೋಪಿಯನ್ ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಅಧಿಕಾರಿಗಳು ಕಳೆದ ವರ್ಷ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದು ಅಮೆರಿಕಕ್ಕೆ ರಫ್ತು ಮಾಡುವ ಯುರೋಪಿಯನ್ ಸರಕುಗಳಲ್ಲಿ ಶೇ.70 ರಷ್ಟು ವಸ್ತುಗಳ ಆಮದಿನ ಮೇಲೆ ಶೇ.15 ರಷ್ಟು ತೆರಿಗೆ ವಿಧಿಸುತ್ತದೆ. ಯುರೋಪಿಯನ್ ಆಯೋಗವು 27 ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ವ್ಯಾಪಾರವನ್ನು ನಿರ್ವಹಿಸುತ್ತದೆ.
ಸಂಸತ್ತಿನ ಅಂತಾರಾಷ್ಟ್ರೀಯ ವ್ಯಾಪಾರ ಸಮಿತಿಯ ಅಧ್ಯಕ್ಷ ಬರ್ನ್ಡ್ ಲ್ಯಾಂಗ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪತ್ರ ಬರೆದಿದ್ದು, ಅಮೆರಿಕ ಆಡಳಿತದಿಂದ ಸುಂಕದ ಅವ್ಯವಸ್ಥೆ ಆಗುತ್ತಿದೆ ಎಂದು ಟೀಕಿಸಿದ್ದಾರೆ. ಯಾರೂ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಯು ಮತ್ತು ಅಮೆರಿಕದ ಇತರ ವ್ಯಾಪಾರ ಪಾಲುದಾರರಿಗೆ ಮುಕ್ತ ಪ್ರಶ್ನೆಗಳು ಮತ್ತು ಬೆಳೆಯುತ್ತಿರುವ ಅನಿಶ್ಚಿತತೆ ಮಾತ್ರ ಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಯು ಅಂಕಿ – ಅಂಶಗಳ ಸಂಸ್ಥೆ ಯೂರೋಸ್ಟಾಟ್ ಪ್ರಕಾರ, 2024 ರಲ್ಲಿ ಇಯು – ಯುಎಸ್ಎ ಸರಕು ಮತ್ತು ಸೇವೆಗಳ ವ್ಯಾಪಾರದ ಮೌಲ್ಯವು 1.7 ಟ್ರಿಲಿಯನ್ ಯುರೋಗಳು ಅಥವಾ ದಿನಕ್ಕೆ ಸರಾಸರಿ 4.6 ಬಿಲಿಯನ್ ಯುರೋಗಳಷ್ಟಿತ್ತು.
ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಯುರೋಪಿಯನ್ ಒಕ್ಕೂಟ ತನ್ನ ಬದ್ಧತೆಗಳಿಗೆ ಬದ್ಧವಾಗಿರುವಂತೆಯೇ ತನ್ನ ಬದ್ಧತೆಗಳನ್ನು ಅಮೆರಿಕ ಗೌರವಿಸುತ್ತದೆ ಎಂದು ನಿರೀಕ್ಷಿಸುತ್ತದೆ. ಇಯು ಉತ್ಪನ್ನಗಳು ಅತ್ಯಂತ ಸ್ಪರ್ಧಾತ್ಮಕ ಪ್ರಯೋಜನ ಪಡೆಯುವುದನ್ನು ಮುಂದುವರಿಸಬೇಕು, ಹಿಂದೆ ಒಪ್ಪಿಕೊಂಡ ಸ್ಪಷ್ಟ ಮತ್ತು ಎಲ್ಲವನ್ನೂ ಒಳಗೊಂಡ ಮಿತಿಯನ್ನು ಮೀರಿ ಸುಂಕಗಳಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದಿದ್ದಾರೆ.
