
ಉದಯವಾಹಿನಿ, ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆ ಪ್ರಾಂತ್ಯದಲ್ಲಿ ವಿಚಿತ್ರ ಮತ್ತು ಸ್ವಾರಸ್ಯಕರ ಘಟನೆ ನಡೆದಿದೆ. ಪೌಲೊ ರೋಡ್ರಿಗೋ ದಾಸ್ ನೆವೆಸ್ ಎಂಬ ಯುವಕ ದೀರ್ಘಕಾಲದಿಂದ ಬ್ರೆಜಿಲ್ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈತ ಕಾರುಗಳ ಸೌಂಡ್ ಸಿಸ್ಟಮ್ ಮತ್ತು ಇತರ ಬಿಡಿಭಾಗಗಳನ್ನು ಕಳವು ಮಾಡುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈತನ ಕೃತ್ಯಗಳು ಹಲವಾರು ಬಾರಿ ಸೆರೆಯಾಗಿದ್ದವು. ಆದರೆ, ಬ್ರೆಜಿಲ್‌ನ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗಂಭೀರ ಅಪರಾಧಗಳಿಗಾಗಿ ಬಂಧಿಸಿ ಜೈಲಿಗೆ ಹಾಕಲು ಸಾಧ್ಯವಿರಲಿಲ್ಲ.
ಪೌಲೊ ತನ್ನ 18ನೇ ವರ್ಷಕ್ಕೆ ಕಾಲಿಡುವ ದಿನದವರೆಗೂ ಪೊಲೀಸರು ಕಾದು ಕುಳಿತಿದ್ದರು. ಆತ 18ನೇ ವರ್ಷಕ್ಕೆ ಕಾಲಿಟ್ಟ ತಕ್ಷಣವೇ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧನದ ನಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಆತನಿಗೆ ಒಂದು ಸರ್ಪ್ರೈಸ್ ನೀಡಿದರು. ಕೇಕ್ ಮತ್ತು ಕೋಕಾಕೋಲಾ ತಂದು ಪೊಲೀಸರು ಆತನ ಸುತ್ತಲೂ ನಿಂತು ವ್ಯಂಗ್ಯವಾಗಿ “ಹ್ಯಾಪಿ ಬರ್ತ್ ಡೇ” ಹಾಡನ್ನು ಹಾಡಿದ್ದಾರೆ. ಈ ಅವಮಾನಕರ ಮತ್ತು ವಿಚಿತ್ರ ಹುಟ್ಟುಹಬ್ಬದ ಆಚರಣೆಯ ವೇಳೆ ಆತನ ತಾಯಿಯೂ ಅಲ್ಲೇ ಇದ್ದರು. ಕೇಕ್ ಕತ್ತರಿಸಿದ ನಂತರ ಪೊಲೀಸರು ಆತನಿಗೆ ಕೈಕೋಳ ತೊಡಿಸಿ ಜೈಲಿಗೆ ಕಳುಹಿಸಿದರು.
