ಉದಯವಾಹಿನಿ,: ಬೇಸಿಗೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಎಷ್ಟೇ ನೀರನ್ನು ಕುಡಿದರೂ, ಬಾಯಾರಿಕೆ ತೀರುವುದೇ ಇಲ್ಲ. ಇದಕ್ಕೆ ಕಾರಣ ನೀರು ಬೆವರಿನ ರೂಪದಲ್ಲಿ ದೇಹದಿಂದ ಹರಿದು ಹೋಗುತ್ತಿರುತ್ತದೆ. ಆದ್ದರಿಂದ ಬೇಸಿಗೆ ದಿನಗಳಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸುವಂತೆ ಅನೇಕ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹಕ್ಕೆ ಸರಿಯಾದ ಪ್ರಮಾಣದಷ್ಟು ನೀರು ಸಿಗಬೇಕು. ನೀರಿನಾಂಶ ಕಡಿಮೆಯಾದಾಗ ದೇಹವು ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯಬೇಕು.
ಜೊತೆಗೆ ದೇಹವನ್ನು ತಂಪಾಗಿಡುವ ಹಾಗೂ ನೀರಿನಾಂಶ ಸಮೃದ್ಧವಾಗಿರುವ ಆಹಾರ ಅಂದರೆ ಕಲ್ಲಂಗಡಿ, ಸೌತೆಕಾಯಿ, ಎಳನೀರು, ಕಿತ್ತಳೆ, ದ್ರಾಕ್ಷಿ, ಮತ್ತು ಮೊಸರನ್ನು ತೆಗೆದುಕೊಳ್ಳಬೇಕು ಎನ್ನಲಾಗುತ್ತದೆ. ಅದರಲ್ಲೂ ಈ ಪಟ್ಟಿಯಲ್ಲಿರುವ ಮತ್ತೊಂದು ಉತ್ತಮ ಆಹಾರ ಎಂದರೆ ಮೂಲಂಗಿ. ಏಕೆಂದರೆ ಸೌತೆಕಾಯಿಯಂತೆ ಮೂಲಂಗಿಯಲ್ಲಿಯೂ ಹೆಚ್ಚು ನೀರಿನ ಅಂಶವಿದೆ. 100 ಗ್ರಾಂ ಮೂಲಂಗಿಯಲ್ಲಿ 93.5 ಗ್ರಾಂವರೆಗೆ ನೀರು ಇರುತ್ತದೆ. ಮೂಲಂಗಿಯಲ್ಲಿರುವ ನಾರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವೂ ಇದಕ್ಕಿದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮಾರ್ಥ್ಯವು ಇದಕ್ಕಿದೆ. ಮೂಲಂಗಿ ದೇಹದಿಂದ ಅನಗತ್ಯ ವಿಷವನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಲಂಗಿಯನ್ನು ನೀವು ನಿಯಮಿತವಾಗಿ ಸೇವಿಸಿದರೆ, ಇದು ಯಕೃತ್ತಿನ ಕಾಯಿಲೆಗಳನ್ನು ತಡೆಯುತ್ತದೆ.
00 ಗ್ರಾಂ ಮೂಲಂಗಿಯಲ್ಲಿ 16 ಕಿಲೋಕ್ಯಾಲರಿಗಳು, 0.1 ಗ್ರಾಂ ಕೊಬ್ಬು, 39 ಮಿಲಿಗ್ರಾಂ ಸೋಡಿಯಂ, 233 ಮಿಲಿಗ್ರಾಂ ಪೊಟ್ಯಾಸಿಯಮ್, 3.4 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 1.6 ಗ್ರಾಂ ಫೈಬರ್, 1.9 ಗ್ರಾಂ ಸಕ್ಕರೆ ಮತ್ತು 0.7 ಗ್ರಾಂ ಪ್ರೋಟೀನ್ ಇರುತ್ತದೆ. ಇದರ ಜೊತೆಗೆ, ವಿಟಮಿನ್ ಸಿ – 24%, ಕ್ಯಾಲ್ಸಿಯಂ – 2%, ಕಬ್ಬಿಣ – 1%, ವಿಟಮಿನ್ ಬಿ 6 – 5%, ಮತ್ತು ಮೆಗ್ನೀಸಿಯಮ್ – 2% ಅನ್ನು ಸಹ ಒಳಗೊಂಡಿದೆ.
