ಉದಯವಾಹಿನಿ, ಸಿಯೋಲ್ : ಉತ್ತರ ಕೊರಿಯದ ಪರಮಾಣು ಸ್ಥಾನಮಾನವನ್ನು ಅಮೆರಿಕ ಒಪ್ಪಿಕೊಂಡರೆ ಅದರೊಂದಿಗೆ ಉತ್ತರ ಕೊರಿಯ ವ್ಯವಹರಿಸಬಹುದಾಗಿದೆ ಎಂದು ಆ ದೇಶದ ಮುಖ್ಯಸ್ಥ ಕಿಮ್ ಜೊಂಗ್ ಉನ್ ಹೇಳಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಆದರೆ, “ವಂಚಕ” ದಕ್ಷಿಣ ಕೊರಿಯ ಜೊತೆಗೆಗಿನ ಸಂಬಂಧವನ್ನು ಸುಧಾರಿಸುವ ಯಾವುದೇ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.
ಕಿಮ್ ಜೊಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಈ ವರ್ಷದ ಉತ್ತರಾರ್ಧದಲ್ಲಿ ಚೀನಾದಲ್ಲಿ ಶೃಂಗಸಭೆ ನಡೆಸುವ ಸಾಧ್ಯತೆ ಬಗ್ಗೆ ಉತ್ತರ ಕೊರಿಯದೊಂದಿಗೆ ಉನ್ನತ ಮಟ್ಟದ ಮಾತುಕತೆಗಳನ್ನು ಹೊಸದಾಗಿ ನಡೆಸಲು ಅಮೆರಿಕ ಮತ್ತು ದಕ್ಷಿಣ ಕೊರಿಯ ಪ್ರಯತ್ನಿಸುತ್ತಿರುವ ನಡುವೆಯೇ ಉತ್ತರ ಕೊರಿಯದ ಈ ನಿಲುವು ಹೊರಬಿದ್ದಿದೆ.
ಅಮೆರಿಕ ಮತ್ತು ದಕ್ಷಿಣ ಕೊರಿಯದ ಪ್ರಯತ್ನಗಳ ಬಗ್ಗೆ ತಿಂಗಳುಗಳಿಂದ ಮೌನವಾಗಿದ್ದ ಕಿಮ್, ಕೊನೆಗೂ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ಯಾಂಗ್ಯಾಂಗ್ನಲ್ಲಿ ನಡೆದ ಆಡಳಿತಾರೂಢ ವರ್ಕಸ್್ರ ಪಾರ್ಟಿಯ ಅಪರೂಪದ ಸಮಾವೇಶದ ನೆರೆದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರು ಈ ಸ್ಪಷ್ಟಿಕರಣ ನೀಡಿದ್ದಾರೆ. “ನಮ್ಮ ದೇಶದ ಹಾಲಿ ಪರಮಾಣು ಸ್ಥಾನಮಾನವನ್ನು ಅಮೆರಿಕ ಗೌರವಿಸಿದರೆ ಹಾಗೂ ತನ್ನ ಪ್ರತಿಕೂಲ ನೀತಿಯನ್ನು ವಾಪ ಪಡೆದರೆ, ಅಮೆರಿಕದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದದಿರಲು ನಮಗೆ ಯಾವುದೇ ಕಾರಣವಿಲ್ಲ” ಎಂದು ಕಿಮ್ ಹೇಳಿರುವುದಾಗಿ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನಿ ವರದಿ ಮಾಡಿದೆ.
