ಉದಯವಾಹಿನಿ, ಮಾಸ್ಕೋ, : ರಶ್ಯ ಒಂದು ಸಾವಿರ ಉಕ್ರೇನ್ ಸೈನಿಕರ ಮೃತದೇಹಗಳನ್ನು ಉಕ್ರೇನ್ ಗೆ ಹಸ್ತಾಂತರಿಸಿದೆ ಎಂದು ರಶ್ಯದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ 35 ರಶ್ಯನ್ ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸಿದೆ.
ಯುದ್ಧದಲ್ಲಿ ಮೃತರಾದ ಸೈನಿಕರ ಮೃತದೇಹಗಳನ್ನು ಉಭಯ ದೇಶಗಳು ನಿಯಮಿತವಾಗಿ ವಿನಿಮಯ ಮಾಡಿಕೊಳ್ಳುತ್ತಿವೆ.
“ಒಂದು ಸಾವಿರ ಉಕ್ರೇನ್ ಸೈನಿಕರ ಮೃತದೇಹಗಳನ್ನು ಉಕ್ರೇನ್ ಗೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ 35 ರಶ್ಯನ್ ಸೈನಿಕರ ಮೃತದೇಹಗಳನ್ನು ನೀಡಿದೆ” ಎಂದು ರಶ್ಯದ ಉನ್ನತ ಸಂಧಾನಕಾರ ಬ್ಲಾದಿಮಿರ್ ಮೆಡಿನ್ಸಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಬಿಳಿ ಬಟ್ಟೆ ಮತ್ತು ನೀಲಿ ಕೈಗವಸು ಧರಿಸಿರುವ ವ್ಯಕ್ತಿಗಳು ಶೀತಲೀಕೃತ ಟ್ರಕ್ ಒಂದರ ಹಿಂಭಾಗದಿಂದ ಮೃತದೇಹವನ್ನು ಒಳಗೊಂಡ ಬಿಳಿ ಬ್ಯಾಗೊಂದನ್ನು ಎತ್ತುತ್ತಿರುವ ಚಿತ್ರವೊಂದನ್ನು ಅವರು ಹಾಕಿದ್ದಾರೆ.
ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 2022ರ ಫೆಬ್ರವರಿಯಲ್ಲಿ ರಶ್ಯವು ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಆರಂಭಿಸಿತು.
ಯುದ್ಧವನ್ನು ನಿಲ್ಲಿಸುವ ಬಗ್ಗೆ ಅಮೆರಿಕದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುವುದಕ್ಕಾಗಿ ಎರಡೂ ದೇಶಗಳ ಸಂಧಾನಕಾರರು ಜಿನೀವಾದಲ್ಲಿದ್ದಾರೆ.
