ಉದಯವಾಹಿನಿ, ಇಸ್ರೇಲ್​, ಅಮೆರಿಕ ಮತ್ತು ಇರಾನ್​ ನಡುವಿನ ಸಂಘರ್ಷವು ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ. ಕಾರಣ, ಇಂದು ಇರಾನ್​ ಬಿಡುಗಡೆ ಮಾಡಿರುವ ಭಯಾನಕ ವಿಡಿಯೋ. ಇರಾನ್​ ಸಂಗ್ರಹಾಗಾರದಲ್ಲಿರುವ ಡ್ರೋನ್​ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಿಡಿಯೋ ಪ್ರದರ್ಶಿಸುತ್ತಿದ್ದು, ಇದು ಅಮೆರಿಕ ಮತ್ತು ಇಸ್ರೇಲ್​ ಮೇಲೆ ದಾಳಿಗೆ ಸನ್ನದ್ಧವಾಗಿದೆ ಎಂದು ಅಲ್ಲಿನ ಸರ್ಕಾರ ಮಾಧ್ಯಮವೊಂದು ವರದಿ ಮಾಡಿದೆ. ಮುಂದುವರಿದು ವಿಡಿಯೋದಲ್ಲಿ, ಇರಾನ್​ ಹಾರಿಬಿಟ್ಟ ಡ್ರೋನ್​ಗಳು, ಕ್ಷಿಪಣಿಗಳು ಇಸ್ರೇಲ್​ ಮತ್ತು ಅಮೆರಿಕದ ನೆಲೆಗಳನ್ನು ಧ್ವಂಸ ಮಾಡುತ್ತಿರುವುದನ್ನೂ ಕಾಣಬಹುದು.

ಎರಡು ದಿನಗಳ ಹಿಂದೆ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಅಮೆರಿಕ ಮತ್ತು ಇಸ್ರೇಲ್​ ಜಂಟಿ ಪಡೆಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್​ ಪ್ರತಿಜ್ಞೆ ಮಾಡಿದೆ. ಇದರ ಸಂಕೇತವಾಗಿ ಇಂದು ಅದು ತನ್ನಲ್ಲಿನ ಶಸ್ತ್ರಾಸ್ತ್ರಗಳನ್ನು ವಿಶ್ವಕ್ಕೆ ತೋರಿಸಿದೆ.

ಸುರಂಗದಲ್ಲಿ ಸಾಲಾಗಿ ನಿಂತಿರುವ ಡ್ರೋನ್​ಗಳು: ಈ ಯುಎವಿ ಡ್ರೋನ್‌ಗಳನ್ನು ಅಮೆರಿಕದ ನೆಲೆಗಳ ಮೇಲೆ ಹಾಕಲು ಬಳಸಲಾಗಿದೆ ಎಂದು ಇರಾನ್​ನ ಫಾರ್ಸ್ ನ್ಯೂಸ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ವಿಶೇಷವೆಂದರೆ, ಇರಾನ್‌ನ ಧಾರ್ಮಿಕ ನಾಯಕ ಖಮೇನಿ ಚಿತ್ರಗಳನ್ನು ಬೃಹತ್ ಸುರಂಗದಲ್ಲಿ ಯುಎವಿಗಳು ಮತ್ತು ಶಸ್ತ್ರಗಳ ಸಾಲಿನಲ್ಲಿ ಕಾಣಬಹುದು. ಭೂಗತ ಸುರಂಗಗಳಲ್ಲಿ ಸಂಗ್ರಹಿಸಿಟ್ಟ ಡ್ರೋನ್‌ಗಳುಳ್ಳ ವಿಡಿಯೋವನ್ನು ಫಾರ್ಸ್ ನ್ಯೂಸ್ ಏಜೆನ್ಸಿ ಹಂಚಿಕೊಂಡಿದೆ. ಅವುಗಳಲ್ಲಿ ಕೆಲವನ್ನು ರಾಕೆಟ್ ಲಾಂಚರ್‌ಗಳ ಜೊತೆ ಜೋಡಿಸಲಾಗಿದೆ. ಇವು ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳಾಗಿವೆ. ಸುರಂಗದಲ್ಲಿ ಇವುಗಳನ್ನು ಉದ್ದದ ಸಾಲಿನಲ್ಲಿ ನಿಲ್ಲಿಸಲಾಗಿದೆ. ಗೋಡೆಗಳ ಮೇಲೆ ಇರಾನ್ ರಾಷ್ಟ್ರಧ್ವಜವನ್ನು ಚಿತ್ರಿಸಲಾಗಿದೆ.

ಇಸ್ರೇಲ್​ ಮೇಲೆ ದಾಳಿ: ಮೂರನೇ ದಿನದ ಸಂಘರ್ಷದಲ್ಲಿ ಇಸ್ರೇಲ್​ನ ಹಲವು ಪ್ರದೇಶಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡ ಕೆಲವೇ ಗಂಟೆಗಳ ನಂತರ ಈ ವಿಡಿಯೋ ಹರಿಬಿಡಲಾಗಿದೆ. ಟೆಲ್ ಅವೀವ್‌ನಲ್ಲಿರುವ ಸರ್ಕಾರಿ ಸಂಕೀರ್ಣದ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ. ಹೈಫಾದಲ್ಲಿನ ಮಿಲಿಟರಿ, ಭದ್ರತಾ ಕೇಂದ್ರಗಳು ಮತ್ತು ಪೂರ್ವ ಜೆರುಸಲೆಮ್ ಮೇಲೆ ಖೈಬರ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸುರಿಯಲಾಗಿದೆ” ಎಂದು ಸರ್ಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ.

ಇತ್ತ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ ವಿಡಿಯೋವೊಂದು ಹಂಚಿಕೊಂಡಿದ್ದು, ಇರಾನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳು ನಮ್ಮ ಎಲ್ಲಾ ಉದ್ದೇಶಗಳನ್ನು ಸಾಧಿಸುವವರೆಗೆ ಮುಂದುವರಿಯುತ್ತದೆ. ನಮ್ಮ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅದರಲ್ಲಿ ಟ್ರಂಪ್​ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!