ಉದಯವಾಹಿನಿ, ಒಟ್ಟು 2 ದಿನಗಳ ಹಿಂದೆ ಆರಂಭವಾದ ಅಮೆರಿಕ ಇಸ್ರೇಲಿ ಸಂಘಟಿತ ದಾಳಿಯಲ್ಲಿ ಇರಾನ್‌ನಾದ್ಯಂತ ಒಟ್ಟು 555 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸೋಮವಾರ ತಿಳಿಸಿದೆ. ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ನಡೆಸಲಾದ ಜಿಯೋನಿಸ್ಟ್ – ಅಮೆರಿಕನ್ ಭಯೋತ್ಪಾದಕ ದಾಳಿಯಿಂದ 131 ನಗರಗಳ ಮೇಲೆ ಪರಿಣಾಮ ಬೀರಿದ್ದು, ನಮ್ಮ ದೇಶದ 555 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣವಾದ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಇರಾನಿನ ರೆಡ್ ಕ್ರೆಸೆಂಟ್ ತಿಳಿಸಿದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿ ಹಲವು ಪ್ರಮುಖರು ಹತ್ಯೆಯಾಗಿದ್ದು, ಇದರಿಂದಾಗಿ ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ನೆರೆ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ನಿರಂತರವಾಗಿ ಕ್ಷಿಪಣಿ, ಡ್ರೋಣ್ ದಾಳಿ ನಡೆಸುತ್ತಿದ್ದು, ಇಂದು ಕುವೈತ್ ಮೇಲೆ ನಡೆಸಿದ ದಾಳಿಯಲ್ಲಿ ಅಮೆರಿಕದ ಎಫ್-15 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದೆ. ಈ ಕುರಿತು ಇರಾನ್‌ನ ಇಸ್ಲಾಮಿಕ್ ರಿಪಬ್ಲಿಕನ್ ಏಜೆನ್ಸಿ ವರದಿ (ಐಆರ್ಎನ್ಎ) ಮಾಡಿದೆ. ಕುವೈತ್‌ನಲ್ಲಿ ಅಮೆರಿಕದ ಎಫ್-15 ಫೈಟರ್ ಜೆಟ್ ಹೊಡೆದುರುಳಿಸಿದ್ದಾಗಿ ಐಆರ್ಎನ್ಎ, ಫೋಟೋ, ವಿಡಿಯೋ ಕ್ಲಿಪ್ಗಳನ್ನು ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಇಸ್ರೇಲ್ ವಿರುದ್ಧ ಸಮರ ಸಾರಿದ ಹೆಜ್ಬೊಲ್ಲಾ – ಪ್ರತಿ ದಾಳಿ ಮಾಡಿದ ಟೆಲ್ಅವಿವ್: ಇರಾನ್‌ನೊಂದಿಗೆ ಉತ್ತಮ ಸಂಬಂ ಕಾಯ್ದುಕೊಂಡಿರುವ ಹೆಜ್ಬೊಲ್ಲಾ, ಉತ್ತರ ಇಸ್ರೇಲ್‌ನ ಹೈಫಾ ಬಳಿಯ ಮಿಲಿಟರಿ ನೆಲೆಯ ಮೇಲೆ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಈ ಪರಿಣಾಮ ಸಂಘರ್ಷವು ಈಗ ಲೆಬನಾನ್‌ಗೂ ಹರಡಿದೆ. ಇಸ್ರೇಲ್ ಆಕ್ರಮಣದ ಮುಂದುವರಿಕೆ ಮತ್ತು ನಮ್ಮ ನಾಯಕರು, ಯುವಕರು ಮತ್ತು ಜನರ ಹತ್ಯೆಯಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಸೂಕ್ತ ಸಮಯ ಮತ್ತು ಸ್ಥಳದಲ್ಲಿ ಪ್ರತಿಕ್ರಿಯಿಸುವ ಹಕ್ಕನ್ನು ನೀಡುತ್ತದೆ ಎಂದು ಹೆಜ್ಬೊಲ್ಲಾ ತನ್ನಿ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದು ಕಡೆ ಇಸ್ರೇಲ್ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿದ್ದು, ಲೆಬನಾನ್‌ನ ರಾಜಧಾನಿ ಬೈರುತ್ ಮೇಲೆ ಇಸ್ರೇಲ್ ಕ್ಷಿಪಣಿಗಳು ಅಪ್ಪಳಿಸಿವೆ. 2024 ರ ನವೆಂಬರ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರ ಈ ದಾಳಿಗಳು ನಡೆದಿವೆ.
ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದ ಹಡಗು ಮಾರ್ಗಗಳು ಮತ್ತು ಇಸ್ರೇಲ್ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
