
ಉದಯವಾಹಿನಿ, ಬೆಂಗಳೂರು: ಪರೀಕ್ಷೆ ಅಂದ್ರೆ ಸಾಕು ಕೆಲವರಿಗೆ ಇನ್ನಿಲ್ಲದ ಭಯ. ಮನೆಯಲ್ಲಿ ಫೇಲಾದ್ರೆ ಪೋಷಕರು ಬೈಯುತ್ತಾರೆ ಅನ್ನೊ ಭಯ ಬೇರೆ. ಈ ಪರೀಕ್ಷಾ ಭಯ ಏನೆಲ್ಲಾ ಮಾಡಿಸುತ್ತೆ ಅನ್ನೋದಕ್ಕೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಸೀನಿಯರ್ ವಿದ್ಯಾರ್ಥಿನಿಯೊಬ್ಬಳು ತನ್ನ ಜೂನಿಯರ್ ಜೊತೆ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ದ್ವಿತೀಯ ಪಿಯುಸಿಯ ತನಿಷ್ಕಾ ಮತ್ತು ಪ್ರಥಮ ಪಿಯುಸಿಯ ತೇಜಸ್ವಿನಿ ಜ.31ರಿಂದಲೇ ನಾಪತ್ತೆಯಾದವರು. ಇವರಿಬ್ಬರು ಹೋಗುವಾಗ ತಮ್ಮ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಅಥವಾ ಯಾವುದೇ ಹಣವನ್ನು ಕೊಂಡೊಯ್ದಿಲ್ಲ. ಕೇವಲ ಕಾಲೇಜು ಬ್ಯಾಗ್ ಮತ್ತು ಆಧಾರ್ ಕಾರ್ಡ್ ಮಾತ್ರ ಹಿಡಿದು ಪರಾರಿಯಾಗಿದ್ದಾರೆ. ತನಿಷ್ಕಾ ಕಳೆದ ವರ್ಷವೂ ಪರೀಕ್ಷೆ ತಪ್ಪಿಸಲು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ಈ ಬಾರಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಜೂನಿಯರ್ ತೇಜಸ್ವಿನಿಯನ್ನ ಕರೆದುಕೊಂಡು ಎಸ್ಕೇಪ್ ಆಗಿದ್ದಾಳೆ.
ಕೆಲ ದಿನಗಳ ಹಿಂದೆ ಗೆಳೆತಿಯರಿಗೆ ಕರೆ ಮಾಡಿದ್ದ ಇವರು, ತಾವು ಮಹದೇಶ್ವರ ಬೆಟ್ಟದಲ್ಲಿ ಇರುವುದಾಗಿ ಹೇಳಿದ್ದರು. ಆದರೆ ಅದಾದ ನಂತರ ಇವರ ಸುಳಿವೇ ಇಲ್ಲದಂತಾಗಿದೆ. ಇತ್ತ ಪೊಲೀಸರು ಸುಮಾರು 50ಕ್ಕೂ ಹೆಚ್ಚು ಕಡೆ ತಲಾಶ್ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರೂ ಆಧಾರ್ ಕಾರ್ಡ್ ತೋರಿಸಿ ಉಚಿತ ಬಸ್‌ಗಳಲ್ಲಿ ರಾಜ್ಯಾದ್ಯಂತ ಸುತ್ತುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
