ಉದಯವಾಹಿನಿ, ನಾಗ್ಪುರ (ಮಹಾರಾಷ್ಟ್ರ): ಮಕ್ಕಳಲ್ಲಿ ದೇವರನ್ನು ಕಾಣಬೇಕಾದವರೇ ಪುಟ್ಟ ಬಾಲಕನೊಂದಿಗೆ ಅಮಾನವೀಯತೆ ಮೆರೆದಿರುವ ಘಟನೆ ನಾಗ್ಪುರದ ಕೊರಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಲ್ಕು ವರ್ಷದ ಮಗುವಿಗೆ ಬಣ್ಣ ಎರಚಿದ್ದಕ್ಕಾಗಿ ನೆರೆಯ ಮಹಿಳೆಯೊಬ್ಬರು ಕುದಿಯುವ ನೀರನ್ನು ಸುರಿದ ಪರಿಣಾಮ ಮಗುವಿಗೆ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೋಳಿ ಹಬ್ಬದ ಸಂಭ್ರಮದಲ್ಲಿದ್ದ 4 ವರ್ಷದ ಬಾಲಕ ತಮ್ಮ ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ಆಡುತ್ತಾ ಬಣ್ಣದ ನೀರನ್ನು ಸ್ಪ್ರೇ ಮಾಡಲು ಹೋಗಿದ್ದಾನೆ. ಈ ವೇಳೆ ಬಕೆಟ್ನಲ್ಲಿದ್ದ ಬಿಸಿ ನೀರನ್ನು ಬಾಲಕನ ಮೇಲೆ ಸುರಿದಿದ್ದಾರೆ. ಎಳೆ ಚರ್ಮದ ಮಗು ನೋವು ತಡೆಯಲಾರದೇ ಅಲ್ಲೇ ಬಿದ್ದು ಒದ್ದಾಡಿದೆ. ತಕ್ಷಣ ಅಲ್ಲಿದ್ದ ಮತ್ತೋರ್ವ ಯುವತಿ ತನ್ನ ಬಕೆಟ್ನಲ್ಲಿದ್ದ ತಣ್ಣೀರನ್ನು ಸುರಿದಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಕನ ದೇಹ ಶೇಕಡಾ 40ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗುವಿನ ತಾಯಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಅಜಾಗೂರತೆಯಿಂದ ನೀರು ಸುರಿದಿದ್ದಾರೆಂದು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದೇನು?: ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಾಗ್ಪುರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಹಿಳೆ ಅಜಾಗರೂಕತೆಯಿಂದ ನೀರನ್ನು ಮಗುವಿನ ಮೇಲೆ ಸುರಿದ್ದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತೀರ್ಮಾನಕ್ಕೆ ಬರಲಾಗಿದೆ. ನೀರು ಬಿಸಿಯಾಗಿರುವುದನ್ನು ಅರಿಯದೇ ಮಹಿಳೆ ಸ್ವಯಂಪ್ರೇರಿತವಾಗಿ ಬಕೆಟ್ ನೀರನ್ನು ಮಗುವಿನ ಮೇಲೆ ಎರಚಿದ್ದಾರೆ. ಮಹಿಳೆ ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇದ್ದಕ್ಕಿದ್ದಂತೆ ಅಚಾನಕ್ಕಾಗಿ ಈ ಘಟನೆ ನಡೆದಿದೆ. ಮಗುವಿನ ತಾಯಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಆರೋಪಿ ಮಹಿಳೆಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಕೊರಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪೋಪಟ್ ಧಯಾತೊಂಡೆ ಹೇಳಿದ್ದಾರೆ.
ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದೆ; ಈ ನಡುವೆ ಮಗುವಿನ ಮೇಲೆ ಬಿಸಿ ನೀರು ಎರಚುತ್ತಿರುವ ವಿಡಿಯೋ ವೈರಲ್ ಆಗಿದೆ. ಹೀಗಾಗಿ ನಾನು ವೈಯಕ್ತಿಕವಾಗಿ ಘಟನೆಯ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದೇನೆ. ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವಿನ ಕುಟುಂಬವನ್ನು ನಾನು ಸಂಪರ್ಕಿಸಿದ್ದೇನೆ ಮತ್ತು ಅವನಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲಾಗುತ್ತಿದೆ. ನಾವು ಈ ವಿಷಯವನ್ನು ಕಾನೂನುಬದ್ಧವಾಗಿ ಅನುಸರಿಸುತ್ತೇವೆ ಎಂದು ನಾಗ್ಪುರದ ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿ ಮುಷ್ತಾಕ್ ಪಠಾಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
