ಉದಯವಾಹಿನಿ, ಸಾಗರ: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಖುರೈ ಪುರಸಭೆಯ ಇಜ್ಜತ್ ಗ್ರಾಮದಲ್ಲಿ ಭಗವಾನ್ ದಾಸ್ ಯಾದವ್ ಎಂಬುವರನ್ನು ಐದು ಜನರು ಕ್ಷುಲ್ಲಕ ವಿಷಯಕ್ಕೆ ಕೊಲೆ ಮಾಡಿದ್ದಾರೆ. ಮೃತನ ಸೊಸೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಮೃತರ ಸಂಬಂಧಿಕರು ಗುರುವಾರ ಬಿನಾ-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಮೂರು ಗಂಟೆಗಳ ರಸ್ತೆ ತಡೆಯಿಂದ ಸಂಚಾರ ಅಸ್ಯವ್ಯಸ್ತವಾಗಿತ್ತು.
ಎಮ್ಮೆ ಹೊಲಕ್ಕೆ ನುಗ್ಗಿದ ಕಾರಣಕ್ಕೆ ಕೊಲೆ: ವರದಿಗಳ ಪ್ರಕಾರ, ಖುರೈ ದೇಹತ್ ಪೊಲೀಸ್ ಠಾಣೆ ಪ್ರದೇಶದ ಇಜ್ಜತ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಬುಧವಾರ 55 ವರ್ಷದ ಭಗವಾನ್ ದಾಸ್ ತನ್ನ ಎಮ್ಮೆಗಳನ್ನು ಮೇಯಿಸುತ್ತಿದ್ದಾಗ, ಅವರ ಒಂದು ಎಮ್ಮೆ ಇನ್ನೊಬ್ಬ ವ್ಯಕ್ತಿಯ ಹೊಲಕ್ಕೆ ನುಗ್ಗಿತ್ತು. ಈ ವೇಳೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಜಮೀನಿನ ಮಾಲೀಕ ಕೋಪಗೊಂಡು ದಾಸ್ ಅವರನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾರೆ.
ಮೃತರ ಸೊಸೆ ದೇವಿ ಯಾದವ್ ಈ ಬಗ್ಗೆ ಮಾತನಾಡಿದ್ದು, ಬುಧವಾರ ತನ್ನ ಮಾವ ಜೈರಾಮ್ ಯಾದವ್, ಕೇದಾರ್ ಯಾದವ್, ಕರ್ತಾರ್ ಯಾದವ್, ನೀರಜ್ ಯಾದವ್ ಮತ್ತು ಕೇದಾರನಾಥ್ ಯಾದವ್ ಅವರೊಂದಿಗೆ ಎಮ್ಮೆಗಳು ಹೊಲಕ್ಕೆ ನುಗ್ಗಿದ್ದರ ಬಗ್ಗೆ ಜಗಳವಾಡಿದ್ದರು. ನಮ್ಮ ಮಾವ ದನಗಳೊಂದಿಗೆ ಹೊರಗೆ ಹೋದಾಗ ಹಿಂಬಾಲಿಸಿ ಬಂದ ಆರೋಪಿಗಳು ಕೊಡಲಿಯಿಂದ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ.
ಈ ನಡುವೆ ದಾಸ್ ಅವರ ಕುಟುಂಬವು ಮೃತರ ಶವದೊಂದಿಗೆ ರಸ್ತೆ ತಡೆ ನಡೆಸಿತು. ಘಟನೆಯಲ್ಲಿ ಭಾಗಿಯಾದ ಎಲ್ಲಾ ಐವರು ಆರೋಪಿಗಳನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸಬೇಕು. ಅವರ ಮನೆಗಳನ್ನು ಕೆಡವುದರ ಜೊತೆಗೆ, ರೈಲ್ವೆಯಲ್ಲಿ ಕೆಲಸ ಮಾಡುವ ಕರ್ತಾರ್ ಯಾದವ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿತು.
ರಾಷ್ಟ್ರೀಯ ಹೆದ್ದಾರಿ ಬಿನಾ-ಸಾಗರ್ ರಸ್ತೆಯ ಕೊಹಾ ಗ್ರಾಮದ ಖೇಜ್ರಾ ಇಜ್ಜತ್ ಛೇದಕದಲ್ಲಿ ಮುತ್ತಿಗೆ ಹಾಕಲಾಯಿತು. ಸುಮಾರು ಮೂರು ಗಂಟೆಗಳ ಕಾಲ ಈ ರಸ್ತೆ ತಡೆ ನಡೆಯಿತು. ಈ ವೇಳೆ ಸಂಚಾರ ಅಸ್ತವ್ಯಸ್ತ ವಾಯಿತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು, ಸೂಕ್ತ ತನಿಖೆ ಹಾಗೂ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
