ಉದಯವಾಹಿನಿ, ಮೈಸೂರು: ಜಿಲ್ಲೆಯಲ್ಲಿ ವಿವಿಧ ಸಾಂಸ್ಕೃತಿಕ ಆಚರಣೆಗಳಿವೆ. ಈ ಪೈಕಿ ರಮ್ಮನಹಳ್ಳಿ ಗ್ರಾಮದಲ್ಲಿ ನಡೆಯುವ ಮಾರಿಹಬ್ಬ ಕೂಡ ವಿಭಿನ್ನ ಆಚರಣೆಗಳಲ್ಲಿ ಒಂದು. ಇಲ್ಲಿನ ಮಾರಿ ಕುಣಿತ ಎಲ್ಲರನ್ನೂ ಸೆಳೆಯುತ್ತದೆ.
ಮೈಸೂರಿನ ಹೊರವಲಯದ ಮಹಾದೇವಪ್ಪರ ಮುಖ್ಯ ರಸ್ತೆಯಲ್ಲಿರುವ ರಮ್ಮನಹಳ್ಳಿಯು ಜಿಲ್ಲೆಯ ದೊಡ್ಡ ಗ್ರಾಮ ಎಂಬ ಖ್ಯಾತಿ ಪಡೆದಿದೆ. ಈ ಗ್ರಾಮದಲ್ಲಿ ಬಹುತೇಕರು ನಾಯಕ ಜನಾಂಗದವರಾಗಿದ್ದು, ಸುಮಾರು 30 ಸಾವಿರ ಜನಸಂಖ್ಯೆ ಇದೆ.
ಕಟ್ಟುನಿಟ್ಟಿನ ಆಚರಣೆ : ಇಲ್ಲಿ ಎರಡು ವರ್ಷಕ್ಕೆ ಒಂದು ಬಾರಿ ನಡೆಯುವ ಗ್ರಾಮ ದೇವತೆ ಮಾರಮ್ಮನವರ ಹಬ್ಬ 15 ದಿನಗಳ ಕಾಲ ನಡೆಯುತ್ತದೆ. ಈ ಹಬ್ಬಕ್ಕೆ ಕರಕಲು ಅಂದರೆ ಹಬ್ಬ ಆಚರಣೆಯ ದಿನಾಂಕ ನಿಗದಿಯಾದ ಮೇಲೆ 15 ದಿನಗಳ ಕಾಲ ಗ್ರಾಮದಲ್ಲಿ ಯಾರೂ ಮನೆಯಲ್ಲಿ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡುವಂತಿಲ್ಲ ಮತ್ತು ಯಾರ ಮನೆಯಲ್ಲಿಯೂ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ. ಹಾಗೆಯೇ ಯಾರ ಮನೆಯಲ್ಲಿಯೂ ಮೆಣಸಿನ ಕಾಯಿಯನ್ನೂ ಸುಡುವ ಹಾಗಿಲ್ಲ. ಈ ರೀತಿ ಕಟ್ಟುನಿಟ್ಟಾಗಿ ಆಚರಣೆ ಪಾಲಿಸಿಕೊಂಡು ಬರಲಾಗುತ್ತಿದೆ.

ಮಹಿಳೆಯರ ವೇಷ ಏಕೆ? : ತಲೆತಲಾಂತರದಿಂದ ಆಚರಿಸಿಕೊಂಡು ಬಂದಿರುವ ಮಾರಮ್ಮನ ಹಬ್ಬದ ಸಂದರ್ಭದಲ್ಲಿ 15 ದಿನ ಪ್ರತಿದಿನ ರಾತ್ರಿ ಗ್ರಾಮದ ಪುರುಷರು ಹೆಣ್ಣಿನ ವೇಷಧರಿಸಿ ಹಬ್ಬವನ್ನು ಆಚರಿಸುತ್ತಾರೆ. ಹಾಗೂ ಮಾರಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ.

ಹೆಣ್ಣಿನ ವೇಷಧರಿಸಿ ಮಾರಿ ಕುಣಿತ : ಈ ಕುರಿತು ಗ್ರಾಮದ ವೈರುಮುಡಿ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, ಮಾರಿಹಬ್ಬದ ಸಂದರ್ಭದಲ್ಲಿ ಪುರುಷರು ಮಹಿಳೆಯರ ವೇಷ ಹಾಕಲು ಕಾರಣವೆಂದರೆ, ಮಾರಮ್ಮ ದೇವಿ ಹೆಣ್ಣು ರೂಪದ ದೇವತೆಯಾಗಿದ್ದು, ಹಿಂದೆ ಮಹಾಮಾರಿ ರೋಗಗಳಿಗೆ ಹೆದರಿದ ಜನರು ಹೆಣ್ಣಿನ ವೇಷವನ್ನು ಹಾಕಿಕೊಂಡು ಮಾರಮ್ಮನನ್ನು ಪೂಜೆಮಾಡಿ, ಪ್ರಾಣ ಉಳಿಸಿಕೊಂಡಿದ್ದರು. ಹೀಗಾಗಿ, ಈಗಲೂ ಮಾರಮ್ಮನ ಕೃಪೆ ನಮ್ಮ ಮೇಲೆ ಇರಲಿ ಎಂಬ ಕಾರಣಕ್ಕೆ ಗಂಡಸರು ಗ್ರಾಮ ದೇವತೆ ಮಾರಮ್ಮನ ಹಬ್ಬದ ಸಂದರ್ಭದಲ್ಲಿ ಹೆಣ್ಣಿನ ವೇಷಧರಿಸಿಕೊಂಡು ಮಾರಿ ಕುಣಿತ ಮಾಡುತ್ತಾರೆ ಎಂದು ತಿಳಿಸಿದರು. ಇಂದು ಕೊನೆಯ ಕುಣಿತವಿದೆ : ಗ್ರಾಮಸ್ಥ ಮದಕರಿ ಮಹಾದೇವ ನಾಯಕ್ ಅವರು ಮಾತನಾಡಿ, ‘ನಮ್ಮ ಗ್ರಾಮದಲ್ಲಿ ಮಾರಿಕುಣಿತ ಸುಮಾರು 400-500 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅದೇ ರೀತಿ ಸಂಪ್ರದಾಯವನ್ನು ನಾವು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇಲ್ಲಿ ಶಾಸನಗಳು ಹಾಗೂ ದೇವರ ವಿಗ್ರಹಗಳಿವೆ. ವೀರಭದ್ರ ಸ್ವಾಮಿ ಹಾಗೂ ನಾರಾಯಣಸ್ವಾಮಿ ಇಬ್ಬರೂ ನಮ್ಮೂರಲ್ಲೇ ನೆಲೆಸಿದ್ದಾರೆ. ಮಾರಮ್ಮ ದೇವತೆ ಶಕ್ತಿ ದೇವತೆ. ನಮ್ಮ ಗ್ರಾಮದಲ್ಲಿ ಎಲ್ಲರೂ ಕಟ್ಟುನಿಟ್ಟಿನಿಂದ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ. 15 ದಿನಗಳಿಂದಲೂ ಕುಣಿತ ಪ್ರಾರಂಭಿಸಿದ್ದೇವೆ. ಇಂದು ಕೊನೆಯ ಕುಣಿತವಿದೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!