ಉದಯವಾಹಿನಿ, ಬೆಂಗಳೂರು: ಆತ್ಮಹತ್ಯೆಗೊಳಗಾಗಿದ್ದಾರೆ ಎನ್ನಲಾದ ಉದ್ಯಮಿ ಕೆ ರಘುನಾಥ್ ಅವರ ನಕಲಿ ಸಹಿ ಮಾಡಿ, ಆಸ್ತಿ ಕಬಳಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಡಿ ಕೆ ಆದಿಕೇಶವುಲು ನಾಯ್ಡು ಪುತ್ರ ಡಿ ಎ ಶ್ರೀನಿವಾಸ್ ಅವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಿಬಿಐ ವಿಚಾರಣೆ ನಡೆಸುತ್ತಿರುವ ಪ್ರಕರಣದಲ್ಲಿ ಒಂಬತ್ತನೇ ಆರೋಪಿಯಾಗಿರುವ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರನ್ನು ಏಳು ದಿನಗಳ ಕಾಲ ಪೊಲೀಸ್ ವಶದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಕಳೆದ ಎರಡು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ತನಿಖೆಯ ಪ್ರಮುಖ ಭಾಗವು ಮುಗಿದಿದೆ ಎಂಬ ಅಂಶವನ್ನು ಪರಿಗಣಿಸಿ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಐದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಹೆಚ್ಚಿನ ತನಿಖೆಗೆ ಸಹಕರಿಸಬೇಕು. ಸೂಚಿಸಿದಾಗ ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕು. ಸಾಕ್ಷಿಗಳನ್ನು ತಿರುಚಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಯತ್ನಿಸಬಾರದು. ಜೈಲಿನಿಂದ ಬಿಡುಗಡೆಯಾದ ಒಂದು ವಾರದೊಳಗೆ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ವಿಚಾರಣೆಗೆ ಭಾಗಿಯಾಗುವುದನ್ನು ಹೊರತುಪಡಿಸಿ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸುವವರೆಗೆ ಕರ್ನಾಟಕ ಪ್ರವೇಶಿಸಬಾರದು. ವಿಚಾರಣಾ ನ್ಯಾಯಾಲಯದ ಮುಂದೆ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಮತ್ತು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ: ರಘುನಾಥ್ ಅವರ ಹಲವಾರು ದಾಖಲೆ ಮತ್ತು ರಶೀದಿಗಳನ್ನು ಶ್ರೀನಿವಾಸ್ ತಿರುಚಿ ಅವುಗಳಿಗೆ ತಾವೇ ಸಹಿ ಮಾಡಿದ್ದು, ಅದರ ಫಲಾನುಭವಿಯೂ ಅವರೇ ಆಗಿದ್ದಾರೆ. ಇತರೆ ಆರೋಪಿಗಳ ಜೊತೆ ಶ್ರೀನಿವಾಸ್ ಪಿತೂರಿ ನಡೆಸಿ, ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಿಬಿಐ ಅರೋಪಿಸಿತ್ತು.
ಆ ದಾಖಲೆಗಳಲ್ಲಿ ನಕಲಿ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಶ್ರೀನಿವಾಸ್ ಬಳಕೆ ಮಾಡಿದ್ದಾರೆ. ಆ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಅವರೇ ಸೃಷ್ಟಿಸಿದ್ದಾರೆ. ಒಟ್ಟಾರೆ ಅವರು 60 ದಾಖಲೆ ಸೃಷ್ಟಿಸಿದ್ದು, ಈ ಪೈಕಿ 46ರಲ್ಲಿ ಅವರ ಸಹಿ ಇದೆ ಎಂದು ಸಿಬಿಐ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿ ಬಂಧಿಸಿತ್ತು. ಇದೀಗ ಜಾಮೀನು ಲಭ್ಯವಾಗಿದೆ.
