ಉದಯವಾಹಿನಿ, ಬೆಂಗಳೂರು: ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಉತ್ಪಾದನೆ ಯೋಜನೆಗೆ ಅನಗತ್ಯವಾಗಿ ಅಡ್ಡಿಪಡಿಸಿ ರಾಜಕೀಯ ಮಾಡಲಾಗುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಅಡ್ಡಿ ಮಾಡಲಾಗಿತ್ತು. ಉದ್ದೇಶಿತ ಯೋಜನೆಯಿಂದಾಗಿ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಯೋಜನೆಯನ್ನು ವಿರೋಧಿಸುವವರೊಂದಿಗೆ ಚರ್ಚೆ ನಡೆಸಲು ಸಿದ್ಧವಾಗಿದ್ದೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್​​ನ ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ. ರಾತ್ರಿ ಹಾಗೂ ಪೀಕ್ ಅವರ್‌ನಲ್ಲಿ ವಿದ್ಯುತ್ ಕೊರತೆಯಿದ್ದು, ಸೋಲಾರ್ ಹಾಗೂ ಪವನ ವಿದ್ಯುತ್ ಶಕ್ತಿ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದಿಂದಲೂ ವಿದ್ಯುತ್ ಪೂರೈಕೆಯಾಗುತ್ತಿದೆ. ಆದಾಗ್ಯೂ ವಿದ್ಯುತ್ ಸ್ಟೋರೇಜ್​ ಮಾಡಲು ಶರಾವತಿ ಕಣಿವೆಯಿಂದ ಜಲ ವಿದ್ಯುತ್ ಉತ್ಪಾದಕ ಘಟಕ ಸ್ಥಾಪಿಸುವ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಕೇಂದ್ರ ವನ್ಯಜೀವಿ ಮಂಡಳಿ ಮುಂದೆ ನಮ್ಮ ಯೋಜನೆ ಬಾಕಿಯಿರುವಾಗಲೇ ಉದ್ದೇಶಿತ ಕಾಮಗಾರಿಗಳಿಗೆ ಅಡ್ಡಿ ಮಾಡುವುದು ಸರಿಯಿಲ್ಲ ಎಂದು ಆಕ್ಷೇಪಿಸಿದರು. ಶರಾವತಿ ಪಂಪ್ಡ್​ ಸ್ಟೋರೇಜ್​ ಹಾಗೂ ವಾರಾಹಿ ವಿದ್ಯುತ್ ಯೋಜನೆಯಿಂದ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಅರಣ್ಯ ಪ್ರದೇಶದ ನೆಲದಡಿಯಲ್ಲಿ ಪೈಪುಗಳನ್ನು ಹಾಕಲಾಗುವುದು. ಸುಮಾರು 110 ಎಕರೆ ಅರಣ್ಯ ಪ್ರದೇಶದಲ್ಲಿ ಪೈಪ್​​ ಹಾದು ಹೋಗಲಿದೆ. ನಾಲ್ಕು ವರ್ಷಗಳಲ್ಲಿ ಯೋಜನೆ ಕಾಮಗಾರಿ ಮುಗಿದ ಬಳಿಕ ಅರಣ್ಯ ಪ್ರದೇಶ ಎಂದಿನಂತೆ ಇರಲಿದ್ದು, ವನ್ಯಜೀವಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

 

Leave a Reply

Your email address will not be published. Required fields are marked *

error: Content is protected !!