ಉದಯವಾಹಿನಿ, ನವದೆಹಲಿ: ಸಂಸತ್ ಅಧಿವೇಶನದ ಎರಡನೇ ಚರಣ ಇಂದಿನಿಂದ ಆರಂಭವಾಗಿದೆ. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾರತದ ನಿಲುವು, ತೈಲ ಭದ್ರತೆ, ವಿದೇಶಾಂಗ ನೀತಿ ಮತ್ತು ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚಿಸಲು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನಿಸಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು, “ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಇಂಧನ ಭದ್ರತೆಗೆ ಎದುರಾಗಿರುವ ಸವಾಲುಗಳ ಕುರಿತು ಮೇಲ್ಮನೆಯಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು. ಗೃಹಬಳಕೆಯ ಗ್ಯಾಸ್ ಬೆಲೆ 60 ರೂಪಾಯಿ ಮತ್ತು ವಾಣಿಜ್ಯ ಗ್ಯಾಸ್ ದರ 115 ರೂಪಾಯಿ ಹೆಚ್ಚಳ ಮಾಡಲಾಗಿದೆ” ಎಂದು ಪ್ರಸ್ತಾಪಿಸಿದರು.’ಇಂಧನ ಭದ್ರತೆ ಬಗ್ಗೆ ಚರ್ಚೆಗೆ ಅವಕಾಶ ಕೊಡಿ’: ಅಡುಗೆ ಅನಿಲ ಬೆಲೆ ಹೆಚ್ಚಳವು ಬಡವರಿಗೆ ಹೊರೆಯಾಗಲಿದೆ. ಈ ಜ್ವಲಂತ ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿಯೂ ಆಗಿರುವ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.ಮುಂದುವರಿದು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, “ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಉದ್ವಿಗ್ನತೆಯು ಭಾರತದ ಮೇಲೆ ಪರಿಣಾಮ ಬಿದ್ದಿದೆ. ಅದರಲ್ಲೂ ಇಂಧನ ಭದ್ರತೆ ಕಳವಳಕಾರಿಯಾಗಿದೆ. ದೇಶಕ್ಕೆ ಬೇಕಾದ ಕಚ್ಚಾ ತೈಲವು ಶೇಕಡಾ 55ರಷ್ಟು ಆ ಪ್ರದೇಶದಿಂದ ಆಮದಾಗುತ್ತದೆ. ಅಲ್ಲಿನ ಘರ್ಷಣೆಯು ನಮ್ಮ ಮೇಲೆ ನೇರ ಪರಿಣಾಮ ಬೀರುತ್ತಿದೆ” ಎಂದರು.
“ಸುಮಾರು 1 ಕೋಟಿ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಸಂಘರ್ಷದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಅಥವಾ ಕಾಣೆಯಾದ ವರದಿಗಳಿವೆ. ಜನರ ಸುರಕ್ಷತೆ ಬಗ್ಗೆ ಆತಂಕವಿದೆ” ಎಂದು ರಾಜ್ಯಸಭೆ ವಿಪಕ್ಷ ನಾಯಕರು ಹೇಳಿದರು.ದೇಶದ ವಿದೇಶಾಂಗ ನೀತಿ ಏನು?-ಅಖಿಲೇಶ್: ಇತ್ತ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಲೋಕಸಭೆಯಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷದ ಕುರಿತು ಚರ್ಚೆ ನಡೆಸಲು ಕೋರಿದ್ದಾರೆ. “ಸರ್ಕಾರವು ತನ್ನ ವಿದೇಶಾಂಗ ನೀತಿಯನ್ನು ಸ್ಪಷ್ಟಪಡಿಸಬೇಕು. ಭಾರತವು ಅಮೆರಿಕದ ಒತ್ತಡಕ್ಕೆ ಮಣಿದು ವರ್ತಿಸುತ್ತಿ”ದೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದೆ ಎಂಬುದನ್ನು ವಿವರಿಸಬೇಕು. ವಿಶೇಷವಾಗಿ ಗಲ್ಫ್ ದೇಶಗಳಲ್ಲಿ ವಾಸಿಸುವ ಮತ್ತು ಕೆಲಸಕ್ಕೆ ತೆರಳಿರುವ ಭಾರತೀಯರ ಸುರಕ್ಷತೆ ಕಾಪಾಡಬೇಕು” ಎಂದು ಆಗ್ರಹಿಸಿದರು.
ಕೇಂದ್ರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅಖಿಲೇಶ್ ಅವರು, “ಭಾರತವು ಅಮೆರಿಕದ ಅಣತಿಯಂತೆ ವರ್ತಿಸುತ್ತಿದೆ. ಒಂದೆಡೆ, ಆತ್ಮನಿರ್ಭರ್ ಬಗ್ಗೆ ಮಾತನಾಡುವ ಸರ್ಕಾರ ಮತ್ತೊಂದೆಡೆ, ಅಮೆರಿಕದ ಆದೇಶಗಳನ್ನು ಪಾಲಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ದೇಶದ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಅಡ ಇಟ್ಟಿದೆ” ಎಂದು ಕಿಡಿಕಾರಿದರು.
