ಉದಯವಾಹಿನಿ, ಪಿಂಪರಿ – ಚಿಂಚವಾಡ (ಮಹಾರಾಷ್ಟ್ರ): ಪ್ರಯಾಣ ಎಂಬುದು ಕೇವಲ ಅಲೆದಾಟವಲ್ಲ. ಅದು ಜೀವನವನ್ನು ಶ್ರೀಮಂತಗೊಳಿಸುವ ಅನುಭವ ಎಂಬ ಚಿಂತನೆಯನ್ನು ಬಲವಾಗಿ ನಂಬಿದವರು ಸುಭಾಷ್ ಗುಗಲೆ. ಇದೇ ಕಾರಣಕ್ಕೆ 75ನೇ ವಯಸ್ಸಿನಲ್ಲೂ ವಿರಾಮ ತೆಗೆದುಕೊಳ್ಳದೇ ತಾವೇ ಸ್ವತಹ ತಮ್ಮ ನ್ಯಾನೋ ಕಾರು ಚಾಲಯಿಸುತ್ತಾ ದೇಶದೆಲ್ಲೆಡೆ ಪ್ರಯಾಣಿಸುವ ಮೂಲಕ ತಮ್ಮ ಜೀವನ ಪ್ರಯಾಣವನ್ನು ಅಮೋಘವಾಗಿಸಿಕೊಂಡಿದ್ದಾರೆ.ಸುಭಾಷ್ ಅವರಿಗೆ ಬಾಲ್ಯದಿಂದಲೂ ಪ್ರಯಾಣ ಎಂದರೆ ಎಲ್ಲಿಲ್ಲದ ಉತ್ಸಾಹ. ಅದು ಎಂದಿಗೂ ಬತ್ತದಂತೆ ಕಾಪಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ತಮ್ಮ ತಂದೆ ಕುದುರೆ ಮೇಲೆ ಹಲವು ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ತಮ್ಮ ಪ್ರಯಾಣದ ಸ್ಪೂರ್ತಿಯನ್ನು ತೆರೆದಿಟ್ಟಿದ್ದಾರೆ.
ಕುದುರೆ ಸವಾರಿಯಿಂದ ಪ್ರಾರಂಭವಾದ ತಮ್ಮ ಪ್ರಯಾಣ ಇದೀಗ ಕಾರಿನ ಪ್ರಯಾಣದವರೆಗೆ ಸಾಗಿದೆ. ಈ ನಡುವೆ ಹಲವು ಮಜಲುಗಳಲ್ಲಿ ಸಂಚಾರದ ವಾಹನಗಳು ಬದಲಾಗಿವೆ. ಇವು ತಮ್ಮ ಪ್ರಯಾಣದ ಉತ್ಸಾಹ ಮಾತ್ರ ಕುಂದಿಸಿಲ್ಲ ಎನ್ನುತ್ತಾರೆ ಅವರು. ಕುದರೆ ಸವಾರಿ ಮೂಲಕ ಆರಂಭವಾದ ಪ್ರಯಾಣ ತಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಬಳಿಕ ಸೈಕಲ್ ಮೂಲಕ ತಮ್ಮ ಈ ಪ್ರಯಾಣದ ಕಥೆ ಆರಂಭವಾಯಿತು. ಅಹ್ಮದ್ನಗರದಿಂದ ಶಿರಡಿವರೆಗೆ ಸೈಕಲ್ನಲ್ಲಿ ಪ್ರಯಾಣಿಸಿದ್ದು ತಮ್ಮ ದೊಡ್ಡ ಸಾಧನೆ ಅಂತಾರೆ ಸುಭಾಷ್
ಬಳಿಕ ದ್ವಿಚಕ್ರ ವಾಹನದಲ್ಲಿ ಊರು ಸುತ್ತುವ ಅನುಭವ ಆಹ್ಲಾದಿಸಿದೆ. ಪ್ರಯಾಣ ಎಂಬುದು ಕೇವಲ ಸುತ್ತಾಟವಲ್ಲ. ಅದು ನನಗೆ ಮಾನಸಿಕ ತೃಪ್ತಿ ನೀಡುತ್ತದೆ. ಅದು ನನ್ನ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಬಾರಿ ಪ್ರಯಾಣವು ಜೀವನಕ್ಕೆ ಸಿಗುವ ಔಷಧವಾಗಿದೆ. ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಅನಾರೋಗ್ಯ ಪರಿಸ್ಥಿತಿ ಚೇತರಿಕೆ ಬಳಿಕ ತೆಗೆದುಕೊಳ್ಳುವ ಔಷಧವಾಗಿ ಇದು ಮಾರ್ಪಟ್ಟಿದೆ ಎನ್ನುತ್ತಾರೆ.
ಪ್ರಯಾಣ ನನ್ನ ದೇಹ ಮತ್ತು ಮನಸ್ಸು ಎರಡನ್ನೂ ಉಲ್ಲಾಸ ಮತ್ತು ಉತ್ಸಾಹವಾಗಿರಿಸಿದ್ದು, ಇದು ನನಗೆ ಸಕಾರಾತ್ಮಕ ದೃಷ್ಟಿಕೋನ ನೋಡುತ್ತದೆ. ಇದುವರೆಗೆ ನಾನು ಹಲವು ರಾಜ್ಯ ಪ್ರಯಾಣಿಸಿದ್ದು, ದಕ್ಷಿಣ ರಾಜ್ಯಗಳಾದ ಪುದುಚೇರಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಿದ್ದೇನೆ. ನ್ಯಾನೋ ಕಾರಿನಲ್ಲಿ ಉತ್ತರ ರಾಜ್ಯಗಳಾದ ಸಿಕ್ಕಿಂ ಮತ್ತು ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ಗೆ ಪ್ರವಾಸ ಮಾಡಿದ್ದಾರೆ. ಈ ಎಲ್ಲ ಪ್ರಯಾಣವನ್ನು ನನ್ನ ನ್ಯಾನೋ ಕಾರಿನಲ್ಲಿ ಸ್ವತಃ ಚಲಾಯಿಸುವ ಮೂಲಕ ಪ್ರಯಾಣಿಸಿರುವುದು ಖುಷಿ ನೀಡಿದೆ.
ತಮ್ಮ ಈ 75ರ ಹರೆಯದಲ್ಲೂ ಕೂಡ 8 ಗಂಟೆಗಳ ಕಾಲ ಕಾರನ್ನು ಚಲಾಯಿಸುತ್ತೇನೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಆದರೆ, ನನಗೆ ಇದು ಜೀವನದ ಭಾಗವಾಗಿದೆ. ಇತ್ತೀಚಿಗೆ ಪುದುಚೇರಿಯ 10 ದಿನ ಪ್ರಯಾಣ ನಡೆಸಿದ್ದು, ಅದು ಖುಷಿ ನೀಡಿದೆ ಎನ್ನುತ್ತಾರೆ ಅವರು.
