ಉದಯವಾಹಿನಿ, ಫುಕೆಟ್(ಥಾಯ್ಲೆಂಡ್): ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗೆ ಸೇರಿದ ವಿಮಾನವೊಂದು ಬುಧವಾರ ಥಾಯ್ಲೆಂಡ್ ಫುಕೆಟ್ ವಿಮಾನ ನಿಲ್ದಾಣದಲ್ಲಿ ‘ಹಾರ್ಡ್ ಲ್ಯಾಂಡಿಂಗ್” ಮಾಡಿದ್ದು, ಮುಂಭಾಗದ ಎರಡು ಚಕ್ರಗಳು (ನೋಸ್ ವೀಲ್ಸ್) ಕಳಚಿಕೊಂಡಿವೆ. ‘ಹೈದರಾಬಾದ್‌ನಿಂದ ಫುಕೆಟ್‌ಗೆ ಹಾರಾಟ ನಡೆಸುತ್ತಿದ್ದ ‘ಬೋಯಿಂಗ್ 737- ಮ್ಯಾಕ್ಸ್ 8′ ವಿಮಾನದ ಮುಂದಿನ ಎರಡು ಚಕ್ರಗಳು ಕಳಚಿ ಹೋಗಿವೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ’ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
‘ಥಾಯ್ಲೆಂಡ್ ವಿಮಾನಯಾನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಂಬಂಧಿತ ಪ್ರಾಧಿಕಾರದಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
‘ವಿಮಾನವು ರನ್‌ವೇಯಲ್ಲಿ ಸಿಲುಕಿಕೊಂಡಿದ್ದು, ನಿಲುಗಡೆ ಜಾಗಕ್ಕೆ ಎಳೆದುಕೊಂಡು ಹೋಗುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
