ಉದಯವಾಹಿನಿ, ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದಾಗಿ ಬಾಂಗ್ಲಾದೇಶವು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲದೆ ತೈಲದ ಕೊರತೆಯನ್ನು ನೀಗಿಸಲು ನೆರೆಯ ಭಾರತದ ಮೇಲೆ ಮೊರೆ ಹೋಗಿದೆ. ಭಾರತವು 5,000 ಟನ್ ಡೀಸೆಲ್ ಪೂರೈಕೆ ಮಾಡಲಿದೆ ಎಂದು ಬಾಂಗ್ಲಾದೇಶದ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ವಕ್ತಾರ ತಿಳಿಸಿದ್ದಾರೆ.ಭಾರತದೊಂದಿಗಿನ ಒಪ್ಪಂದದ ಪ್ರಕಾರ ವಾರ್ಷಿಕವಾಗಿ 1,80,000 ಟನ್ ಡೀಸೆಲ್ ಪೈಪ್‌ಲೈನ್ ಮೂಲಕ ಸರಬರಾಜು ಆಗಬೇಕು. ಈ ಒಪ್ಪಂದದ ಭಾಗವಾಗಿ 5,000 ಟನ್ ಡೀಸೆಲ್ ಪೂರೈಕೆಯಾಗಲಿದೆ ಎಂದಿದ್ದಾರೆ. ಇದೇ ಒಪ್ಪಂದದ ಅಡಿಯಲ್ಲಿ ಆರು ತಿಂಗಳಲ್ಲಿ 90,000 ಟನ್ ಡೀಸೆಲ್ ಆಮದು ಮಾಡಿಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.
ಮಾರುಕಟ್ಟೆ ಪರಿಸ್ಥಿತಿ ಹಾಗೂ ಲಭ್ಯತೆಯ ಆಧಾರದಲ್ಲಿ ಹೆಚ್ಚುವರಿ ಡೀಸೆಲ್ ಪೂರೈಕೆ ಸಂಬಂಧ ಬಾಂಗ್ಲಾದೇಶದ ಮನವಿಯನ್ನು ಭಾರತ ಪರಿಗಣಿಸಲಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶಕ್ಕೆ ಹೆಚ್ಚುವರಿಯಾಗಿ 5,000 ಟನ್ ಡೀಸೆಲ್ ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಮಾಡಿರುವ ಮನವಿ ಕುರಿತು ಭಾರತ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ಒಪ್ಪಂದದ ಅಡಿಯಲ್ಲಿ ಭಾರತ 5,000 ಟನ್ ಡೀಸೆಲ್ ಸರಬರಾಜು ಮಾಡುವುದಾಗಿ ಬಾಂಗ್ಲಾದೇಶ ಹೇಳಿಕೊಂಡಿತ್ತು. ಇದು ಅಸ್ತಿತ್ವದಲ್ಲಿರುವ ಒಪ್ಪಂದದ ಭಾಗವಾಗಿದ್ದು, ಹೆಚ್ಚುವರಿ ಪೂರೈಕೆಯ ಭಾಗವಲ್ಲ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಏಷ್ಯಾದಲ್ಲಿ ಉಂಟಾದ ಬಿಕ್ಕಟ್ಟಿನ ನಂತರ ತೈಲ ಸರಬರಾಜಿನಲ್ಲಿ ಅಡಚಣೆ ಎದುರಾಗಿದೆ. ಬಾಂಗ್ಲಾದೇಶವು ಪೆಟ್ರೋಲ್ ಹಾಗೂ ಡೀಸೆಲ್ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ಎದುರಿಸಲು ಇಂಧನ ಮಾರಾಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
2017ರ ‘ಭಾರತ-ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್’ ಉಪಕ್ರಮದ ಅಡಿಯಲ್ಲಿ ಬಾಂಗ್ಲಾದೇಶಕ್ಕೆ ಭಾರತ ಡೀಸೆಲ್ ಪೊರೈಸುತ್ತಿದೆ. ಅಸ್ಸಾಂನ ನುಮಾಲಿಗಢ ಸಂಸ್ಕರಣಾಗಾರದಿಂದ ಡೀಸೆಲ್ ಪೂರೈಕೆಯಾಗುತ್ತಿದೆ.
