ಉದಯವಾಹಿನಿ, ತಿರುಪತಿ(ಆಂಧ್ರ ಪ್ರದೇಶ): ಪಶ್ಚಿಮ ಏಷ್ಯಾ ಸಂಘರ್ಷ ಭಾರತದಲ್ಲಿ ಎಲ್ಪಿಜಿ ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಈ ಬಿಕ್ಕಟ್ಟು ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆ ಮತ್ತು ಅನ್ನದಾನಂ ಪ್ರಸಾದ ತಯಾರಿಕೆಯಲ್ಲಿ ಯಾವುದೇ ಅಡಚಣೆ ಉಂಟುಮಾಡಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂಸ್ (ಟಿಟಿಡಿ) ಸ್ಪಷ್ಟಪಡಿಸಿದೆ.
ವಿಶ್ವವಿಖ್ಯಾತ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದ ಆಡಳಿತವನ್ನು ಟಿಟಿಡಿ ನಡೆಸುತ್ತಿದ್ದು, ಪ್ರತಿನಿತ್ಯ ಬರುವ ಲಕ್ಷಾಂತರ ಭಕ್ತರಿಗೆ ಲಡ್ಡು ಮತ್ತು ಅನ್ನ ಪ್ರಸಾದ ಸೇವೆ ನೀಡಲಾಗುತ್ತಿದೆ.
ಒಂದು ದಿನದ ಪ್ರಸಾದ ತಯಾರಿಗೆ ಬೇಕು 10 ಟನ್ ಗ್ಯಾಸ್: ಟಿಟಿಡಿಯ ಅಧಿಕಾರಿಗಳು ಪ್ರತಿಕ್ರಿಯಿಸಿ, ತಿರುಮಲದಲ್ಲಿ ಪ್ರತಿದಿನ ಸುಮಾರು 4 ಲಕ್ಷ ಲಡ್ಡು ತಯಾರಿಸಲಾಗುತ್ತಿದೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ 10 ಲಕ್ಷಕ್ಕೆ ಏರುತ್ತದೆ. ತಿರುಮಲದಲ್ಲಿ ಲಡ್ಡು ತಯಾರಿಕೆ ಮತ್ತು ಅನ್ನದಾನ ಘಟಕಗಳಿಗೆ ಒಟ್ಟಾರೆ ಅಡುಗೆ ಅನಿಲದ ಅವಶ್ಯಕತೆ ದಿನಕ್ಕೆ 10 ಟನ್‌ಗಳಿಗಿಂತ ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ.
ತಿರುಮಲದಲ್ಲಿ ಸದ್ಯ ಅಡುಗೆ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ಬಿಕ್ಕಟ್ಟು ಉಂಟಾಗಿಲ್ಲ. ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸದೆ ಲಡ್ಡುಗಳ ವಿತರಣೆ ನಡೆಯುತ್ತಿದೆ. ಲಡ್ಡು, ಸಿಹಿತಿಂಡಿಗಳು ಮತ್ತು ಅನ್ನಪ್ರಸಾದಗಳನ್ನು ನಿರಂತರವಾಗಿ ತಯಾರಿಸಲು ದೇವಾಲಯ ಒಂದು ವಾರಕ್ಕೆ ಸಾಕಾಗುವಷ್ಟು ಅಡುಗೆ ಅನಿಲದ ಬಫರ್ ಸ್ಟಾಕ್ ನಿರ್ವಹಿಸುತ್ತಿದೆ.
ಲಡ್ಡು ತಯಾರಿಕೆ ಮತ್ತು ಮುಖ್ಯ ಅನ್ನದಾನ ಕೇಂದ್ರಕ್ಕೆ ಪೈಪ್ ಮೂಲಕ ಅನಿಲ ಸರಬರಾಜು ಆಗುತ್ತದೆ. ಆದರೆ ಇತರ ಅನ್ನದಾನ ಘಟಕಗಳಿಗೆ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ. ಅನ್ನದಾನಂ ಕೇಂದ್ರದಲ್ಲಿ ದಿನಕ್ಕೆ 75,000 ಊಟವನ್ನು ಸಿದ್ಧ ಮಾಡಲಾಗುತ್ತದೆ. ಎಲ್ಲಾ ಕೇಂದ್ರಗಳಲ್ಲಿ ಸುಮಾರು 2.25 ಲಕ್ಷ ಸೇವೆ ನೀಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಅನ್ನದಾನಂ ಕೇಂದ್ರದ ಆಹಾರ ತಯಾರಿ 3 ಲಕ್ಷ ದಾಟುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
