ಉದಯವಾಹಿನಿ, ನವದೆಹಲಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಯಂದು ನನ್ನ ತಾಯಿ ನನ್ನ ದೇಶ ಅಭಿಯಾನಕ್ಕೆ ದೇಶಾದ್ಯಂತ ಚಾಲನೆ ನೀಡುವುದಾಗಿ ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದಾರೆ.
ಮನ್ -ಕಿ- ಬಾರ್ ರೇಡಿಯೋ ಪ್ರಸಾರದ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆ.15ರಂದು ದೇಶಾದ್ಯಂತ ವೀರ ಯೋಧರಿಗೆ ಗೌರವ ಸಮರ್ಪಿಸಲು ನನ್ನ ತಾಯಿ, ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಭಾರತೀಯರೆಲ್ಲರೂ ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಅಮೃತ್ ಮಹೋತ್ಸವ ಎಲ್ಲೆಡೆ ಪ್ರತಿಧ್ವನಿಸುತ್ತಿದೆ ಆಗಸ್ಟ್ 15ರಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಹುತಾತ್ಮರಾದ ವೀರ ಯೋಧರನ್ನು ಗೌರವಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗುವುದು. ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಈ ಅಭಿಯಾನಕ್ಕಾಗಿ ನಿವೃತ್ತ ಯೋಧರು ಹಾಗೂ ಲಕ್ಷಾಂತರ ದೇಶಪ್ರೇಮಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಅಳವಡಿಸಲಾಗುವುದು, ಜೊತೆಗೆ ಅಮೃತ ಕಲಶ ಯಾತ್ರೆಯನ್ನು ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
7500 ಚಿತಾಭಸ್ಮಗಳಲ್ಲಿ ಬರುವ ಮಣ್ಣು ಮತ್ತು ಸಸಿಗಳನ್ನು ಬೆಸೆಯುವ ಮೂಲಕ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಅಮೃತ ವಾಟಿಕಾವನ್ನು ನಿರ್ಮಿಸಲಾಗುವುದು. ಈ ಅಮೃತ ವಾಟಿಕಾ ಕೂಡ ಏಕ್ ಭಾರತ್ ಶ್ರೇಷ್ಠ್ ಭಾರತ್‍ನ ಭವ್ಯ ಚಿಹ್ನೆ ಎಂದೂ ಪ್ರಧಾನಿ ಮೋದಿ ಹೇಳಿದರು.ಇದಲ್ಲದೆ, ಈ ವರ್ಷ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಹಾನಿಗೊಳಗಾದ ಹಲವಾರು ವ್ಯಕ್ತಿಗಳ ಜೀವಗಳನ್ನು ಉಳಿಸಿದ್ದಕ್ಕಾಗಿ ಅವರು ಎನ್‍ಡಿಆರ್‍ಎಫ್ ಸಿಬ್ಬಂದಿಯನ್ನು ಶ್ಲಾಘಿಸಿದರು.
