ಉದಯವಾಹಿನಿ, ಮುಂಬೈ: 2026 ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ಸಂಭ್ರಮಾಚರಣೆ ವೇಳೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.
ಮಾ.8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಈ ವೇಳೆ ನಡೆದ ಸಂಭ್ರಮಾಚರಣೆ ಸಮಯದಲ್ಲಿ ಪಾಂಡ್ಯ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪುಣೆ ಮೂಲದ ವಕೀಲ ವಾಜಿದ್ ಖಾನ್ ಬಿಡ್ಕರ್ ಅವರು ಮಹಾರಾಷ್ಟ್ರದ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹೀಕಾ ಅವರೊಂದಿಗೆ ರಾಷ್ಟ್ರಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆ ಪಾಂಡ್ಯ ರಾಷ್ಟ್ರಧ್ವಜವನ್ನು ಬೆನ್ನಿಗೆ ಸುತ್ತಿಕೊಂಡು ವೇದಿಕೆಯ ಮೇಲೆ ಮಲಗಿ ಸೆಲ್ಫಿ ಕ್ಲಿಕ್ಕಿಸಿದ್ದರು. ಪಾಂಡ್ಯ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಗಳು ವ್ಯಕ್ತವಾಗಿವೆ. ಇತರ ಆಟಗಾರರು ತಮ್ಮ ಪತ್ನಿಯರು ಅಥವಾ ಗೆಳತಿಯರೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಾರೆ. ಆದರೆ ಯಾರೂ ಇವರ ರೀತಿ ವರ್ತಿಸುವುದಿಲ್ಲ ಎಂದು ನೆಟ್ಟಿಗರು ಸಿಟ್ಟು ಹೊರಹಾಕಿದ್ದರು.
