ಉದಯವಾಹಿನಿ, ಮುಂಬೈ: ಅಮೆರಿಕ -ಇಸ್ರೇಲ್-ಇರಾನ್ ಸಂಘರ್ಷವು ಎರಡನೇ ವಾರಕ್ಕೆ ಪ್ರವೇಶಿಸುತ್ತಿದೆ. ಇದು ಭಾರತದ ಔಷಧ ವಲಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಔಷಧ ಬೆಲೆಗಳಲ್ಲಿ ತೀವ್ರ ಏರಿಕೆ ಮತ್ತು ಪೂರೈಕೆ ಅಡಚಣೆಗಳು ಉಂಟಾಗುವ ಸಾಧ್ಯತೆಗಳಿವೆ. ಇದು ಜಾಗತಿಕ ಇಂಧನ ಮತ್ತು ಸಾಗಣೆ ಮಾರ್ಗಗಳನ್ನು ಬಿಗಿಗೊಳಿಸುವ ಎಲ್ಲ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಬಫರ್ ಸ್ಟಾಕ್‌ಗಳು ಖಾಲಿಯಾಗುವುದರಿಂದ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಹೆಚ್ಚಾಗುವುದರಿಂದ ಮಾರ್ಚ್ ಅಂತ್ಯದಿಂದ ಔಷಧ ಮತ್ತು ಮಿತ್ರ ಉತ್ಪನ್ನಗಳ ಬೆಲೆಗಳು ಶೇ 10-20ರಷ್ಟು ಏರಿಕೆಯಾಗಬಹುದು ಎಂದು ಉದ್ಯಮ ತಜ್ಞರು ಎಚ್ಚರಿಸಿದ್ದಾರೆ.
ನಿರ್ಣಾಯಕ ಜಾಗತಿಕ ಇಂಧನ ಮತ್ತು ಸರಕು ಕಾರಿಡಾರ್ ಆಗಿರುವ ಹಾರ್ಮುಜ್ ಜಲಸಂಧಿ ಬಂದ್​ ಆಗಿರುವುದರಿಂದ ಭಾರತದ ಔಷಧ ಪೂರೈಕೆ ಸರಪಳಿ ಮತ್ತು ರಫ್ತುಗಳ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಈ ಜಲಸಂಧಿಯು ಕಚ್ಚಾ ತೈಲ ಮತ್ತು ಪಶ್ಚಿಮ ಏಷ್ಯಾ ಮತ್ತು ಯುರೋಪಿನಿಂದ ಪಡೆಯುವ ಪ್ರಮುಖ ಔಷಧೀಯ ಒಳಹರಿವಿನ ಪ್ರಾಥಮಿಕ ಸಾರಿಗೆ ಮಾರ್ಗವಾಗಿದೆ.
ಪೂರೈಕೆ ಸರಪಳಿಗಳಿಗೆ ‘ಮತ್ತೊಂದು ಅಜೈವಿಕ ಕೋವಿಡ್’: ಕೋಟಕ್ ಸೆಕ್ಯುರಿಟೀಸ್‌ನ ಎಫ್‌ಎಕ್ಸ್ ಮತ್ತು ಬಡ್ಡಿದರಗಳ ಸಂಶೋಧನಾ ಮುಖ್ಯಸ್ಥೆ ಅನಿಂದ್ಯಾ ಬ್ಯಾನರ್ಜಿ, ಈ ಅಡಚಣೆಯನ್ನು ಸಾಂಕ್ರಾಮಿಕ – ಯುಗದ ಆಘಾತಗಳಿಗೆ ಹೋಲಿಸಿದ್ದಾರೆ. ಇದು ಮತ್ತೊಂದು ಅಜೈವಿಕ ಕೋವಿಡ್ ಎಂದು ಅನಿಂದ್ಯಾ ಬ್ಯಾನರ್ಜಿ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಬೆಲೆ ನಿಗದಿ, ಲಭ್ಯತೆ ಮತ್ತು ಪೂರೈಕೆ ಸರಪಳಿಗಳ ಮೇಲಿನ ಏಕಕಾಲಿಕ ಒತ್ತಡಕ್ಕೆ ಇದು ಕಾರಣವಾಗಲಿದೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಕೆ ಕಾಣುತ್ತಿವೆ. ಸಂಭಾವ್ಯ ಉಲ್ಬಣವನ್ನು ಕಡಿಮೆ ಮಾಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೆ ಗುರುವಾರ ಬ್ರೆಂಟ್ ಕಚ್ಚಾ ತೈಲ ಮತ್ತೆ ಬ್ಯಾರೆಲ್‌ಗೆ $100 ಕ್ಕೆ ಏರಿಕೆ ಕಂಡಿದೆ. ಹೆಚ್ಚಿನ ಇಂಧನ ಬೆಲೆಗಳು ಔಷಧ ತಯಾರಿಕೆಯಲ್ಲಿ ಬಳಸುವ ಸಕ್ರಿಯ ಔಷಧೀಯ ಪದಾರ್ಥಗಳು ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಬೆಲೆಯನ್ನು ನೇರವಾಗಿ ಹೆಚ್ಚಿಸುತ್ತವೆ. ಭಾರತವು ತನ್ನ ಔಷಧೀಯ ಪದಾರ್ಥಗಳಲ್ಲಿ ಸರಿಸುಮಾರು ಶೇ 15-16 ರಷ್ಟು ಯುರೋಪ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಇವುಗಳಲ್ಲಿ ಹೆಚ್ಚಿನವು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗಿ ಬರಬೇಕಿದೆ. ಇದರ ಜೊತೆಗೆ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ಗಲ್ಫ್ ರಾಷ್ಟ್ರಗಳಿಂದ ಪಡೆಯಲಾದ ಕೀ ಸ್ಟಾರ್ಟಿಂಗ್ ಮೆಟೀರಿಯಲ್ಸ್ ಮತ್ತು ದ್ರಾವಕಗಳು ಹೆಚ್ಚು ದುಬಾರಿಯಾಗುತ್ತಿವೆ.

ಸಿರಪ್‌ಗಳು ಮತ್ತು ಟ್ಯಾಬ್ಲೆಟ್ ಪ್ಯಾಕೇಜಿಂಗ್ ವೆಚ್ಚಗಳು ಹೆಚ್ಚುತ್ತಿವೆ. ಉತ್ಪಾದನೆಯಲ್ಲಿ ಬಳಸುವ ಕೈಗಾರಿಕಾ ಅನಿಲಗಳ ಕೊರತೆ ಉಂಟಾಗುತ್ತಿದೆ. ಎಲ್‌ಪಿಜಿ ಮತ್ತು ಸಿಎನ್‌ಜಿ ಪಡಿತರ ಉತ್ಪಾದನೆ ಮತ್ತು ವಿತರಣೆಯ ಮೇಲೆ ಪರಿಣಾಮ ಬೀರುತ್ತಿದೆ.  ಸರಕು ಮತ್ತು ಸಾಗಣೆ ಶುಲ್ಕಗಳಲ್ಲಿ ತೀವ್ರ ಏರಿಕೆ: ಪೆಟ್ರೋಲಿಯಂ ಉಪ ಉತ್ಪನ್ನಗಳು ಈಗಾಗಲೇ ದುಬಾರಿಯಾಗಿವೆ ಎಂದು ಆಲ್ ಫುಡ್ ಅಂಡ್ ಡ್ರಗ್ ಲೈಸೆನ್ಸ್ ಹೋಲ್ಡರ್ಸ್ ಫೌಂಡೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಅಭಯ್ ಪಾಂಡೆ ಹೇಳಿದ್ದಾರೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮೇಲೆ ಇದು ಪರಿಣಾಮ ಬೀರಿದ್ದು, ವಿತರಣೆಯೂ ನಿಧಾನವಾಗಿದೆ. ಮಾರ್ಚ್ ಅಂತ್ಯದ ನಂತರ ಕೆಮ್ಮಿನ ಸಿರಪ್‌ಗಳು, ಗ್ಲಿಸರಿನ್ ಮತ್ತು ಮಾಸ್ಕ್‌ಗಳ ಬೆಲೆಗಳು ಹೆಚ್ಚಾಗುವಂತೆ ಮಾಡಿದೆ ಎಂದು ಅವರು ಇಟಿವಿ ಭಾರತ್‌ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!