ಉದಯವಾಹಿನಿ, ಅಲ್ವಾರ್ (ರಾಜಸ್ಥಾನ): ಜಿಲ್ಲೆಯ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಹೆಣ್ಣು ಹುಲಿಯಾದ ‘ST-17’ ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಅಭಯಾರಣ್ಯದಲ್ಲಿನ ಒಟ್ಟು ಹುಲಿಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ ಎಂದು ಸರಿಸ್ಕಾ ಹುಲಿ ಅಭಯಾರಣ್ಯ ಕ್ಷೇತ್ರ ನಿರ್ದೇಶಕ ಮತ್ತು CCF ಸಂಗ್ರಾಮ್ ಸಿಂಗ್ ಕಟಿಯಾರ್ ಎಂಬುವರು ಮಾಹಿತಿ ನೀಡಿದ್ದಾರೆ.
ST-17 ಹುಲಿಯ ಮೂರು ಮರಿಗಳ ಜನನದೊಂದಿಗೆ, ಸರಿಸ್ಕಾದಲ್ಲಿ ಹುಲಿಗಳ ಸಂಖ್ಯೆ ಈಗ 52ಕ್ಕೆ ಏರಿದೆ. ಇದರಲ್ಲಿ 11 ಗಂಡು ಹುಲಿಗಳು, 17 ಹೆಣ್ಣು ಹುಲಿಗಳು ಮತ್ತು 24 ಮರಿಗಳು ಸೇರಿವೆ. ಇದು ಸರಿಸ್ಕಾದಲ್ಲಿ ಇಲ್ಲಿಯವರೆಗಿನ ಅತಿ ಹೆಚ್ಚು ಹುಲಿಗಳ ಸಂಖ್ಯೆ ಆಗಿದೆ. ST-17 ಈ ಹಿಂದೆಯೂ ಮರಿಗಳಿಗೆ ಜನ್ಮ ನೀಡಿದೆ. ಇದು ST-17 ಹುಲಿಯ ಎರಡನೇ ಯಶಸ್ವಿ ಸಂತಾನೋತ್ಪತ್ತಿಯಾಗಿದೆ. ಹುಲಿ ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯಕ್ರಮದ ಯಶಸ್ಸಿನ ಪರಿಣಾಮವೇ ಸರಿಸ್ಕಾದಲ್ಲಿ ST-17 ಮೂರು ಮರಿಗಳ ಜನನಕ್ಕೆ ಮುಖ್ಯ ಕಾರಣ. 2004-05ರ ಅವಧಿಯಲ್ಲಿ ಬೇಟೆಗಾರರ ದಾಳಿಯಿಂದ ಸರಿಸ್ಕಾದಲ್ಲಿ ಹುಲಿಗಳು ಸಂಪೂರ್ಣವಾಗಿ ಅಳಿವಿನಂಚಿಗೆ ತಲುಪಿದ್ದವು.
2008ರಲ್ಲಿ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಿಂದ ಹುಲಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಮೂಲಕ ವಿಶ್ವದ ಮೊದಲ ಹುಲಿ ಪುನರ್ವಸತಿ ಯೋಜನೆಯನ್ನು ಆರಂಭಿಸಲಾಯಿತು. ಅಂದಿನಿಂದ, ನಿರಂತರ ಗಸ್ತು, ಕ್ಯಾಮೆರಾ ಟ್ರ್ಯಾಪ್ ಮೇಲ್ವಿಚಾರಣೆ ಮತ್ತು ಆಹಾರದ ಮೂಲಗಳ ಹೆಚ್ಚಳ ಇಂದು ಮತ್ತು ಗ್ರಾಮ ಸ್ಥಳಾಂತರದ ಮೂಲಕ ಸರಿಸ್ಕಾದಲ್ಲಿ ಹುಲಿಗಳ ಸಂಖ್ಯೆ ಸ್ಥಿರವಾಗಿ ಹೆಚ್ಚಾಗಿದೆ ಎಂದು ಸಂಗ್ರಾಮ್ ಸಿಂಗ್ ಕಟಿಯಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವ ಸಂಜಯ್ ಶರ್ಮಾ ಪೋಸ್ಟ್: ಸರಿಸ್ಕಾದ ಅಕ್ಬರ್‌ಪುರ ವಲಯದಲ್ಲಿ ತಾಯಿ ಹುಲಿ ತನ್ನ ಮೂರು ಮರಿಗಳೊಂದಿಗೆ ಸಂಚರಿಸುತ್ತಿರುವ ದೃಶ್ಯಗಳು ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಸೆರೆಯಾಗಿವೆ. ತಾಯಿ ಹುಲಿ ಮತ್ತು ಮರಿ ಹುಲಿಗಳ ಚಟುವಟಿಕೆ ಸಾಮಾನ್ಯವಾಗಿರುವುದನ್ನು ಗಮನಿಸಲಾಗಿದೆ. ಬೆಳೆಯುತ್ತಿರುವ ಹುಲಿಗಳ ಕುಟುಂಬವು ರಾಜಸ್ಥಾನದ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳ ಯಶಸ್ಸಿನ ಕಥೆಯನ್ನು ಸಾರುತ್ತಿದೆ. ನಮ್ಮ ಸರ್ಕಾರವು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಸದಾ ಬದ್ಧವಾಗಿದೆ ಎಂದು ಅರಣ್ಯ ಸಚಿವ ಸಂಜಯ್ ಶರ್ಮಾ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.
