ಉದಯವಾಹಿನಿ, ಚಿಕ್ಕು, ಈ ಹಣ್ಣು ಸಣ್ಣದಾದರೂ ರುಚಿಯಲ್ಲಿ ಇದನ್ನು ಮೀರಿಸೋರಿಲ್ಲ. ಸಿಹಿ ಮತ್ತು ರಸಭರಿತ ಈ ಹಣ್ಣನ್ನು ಹಾಗೆ ತಿನ್ನೋದಕ್ಕೂ ಚೆನ್ನಾಗಿರುತ್ತೆ, ಜ್ಯೂಸ್ , ಮಿಲ್ಕ್ ಶೇಕ್ ಕೂಡ ಹೆಚ್ಚು ರುಚಿ. ಇದರ ಕಂದು ಬಣ್ಣದ ಸಿಪ್ಪೆ ಮತ್ತು ಕ್ಯಾರಮೆಲ್‌ನಂತಹ ಸಿಹಿ ರುಚಿಯ ತಿರುಳು ಇದನ್ನು ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರೂ ಇಷ್ಟಪಡುವ ಹಣ್ಣಾಗಿಸಿದೆ. ನೈಸರ್ಗಿಕ ಸಕ್ಕರೆ (Natural Sugar) ಹಾಗೂ ಆಹಾರದ ನಾರಿನಿಂದ ಸಮೃದ್ಧವಾಗಿರುವ ಚಿಕ್ಕು ಆರೋಗ್ಯಕ್ಕೂ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.
ಚಿಕ್ಕು ಹಣ್ಣಿನ ಇಂಗ್ಲಿಷ್ ಹೆಸರೇನು?
ಚಿಕ್ಕುಕವನ್ನು ಇಂಗ್ಲಿಷ್‌ನಲ್ಲಿ ಸಪೋಟಾ ಅಥವಾ ಸಪೋಡಿಲ್ಲಾ ಎಂದು ಕರೆಯಲಾಗುತ್ತದೆ. ಈ ಹಣ್ಣು ಹೊರಗೆ ಕಂದು ಬಣ್ಣದ ಸಿಪ್ಪೆ ಹೊಂದಿದ್ದು, ಒಳಗೆ ಮೃದುವಾದ ಮತ್ತು ಸಿಹಿಯಾದ ತಿರುಳಿನೊಂದಿಗೆ ಕಪ್ಪು ಬೀಜಗಳನ್ನು ಹೊಂದಿರುತ್ತದೆ. ಈ ಹಣ್ಣಿನ ವಿಶೇಷತೆಯೇ ಅದರ ಸಿಹಿ ಮತ್ತು ರುಚಿ.
ಚಿಕ್ಕು ಹಣ್ಣನ್ನು ಎಲ್ಲಿ ಹೆಚ್ಚು ಬೆಳೆಯಲಾಗುತ್ತದೆ?
ಚಿಕ್ಕು ಉತ್ಪಾದನೆಯಲ್ಲಿ ನಮ್ಮ ಭಾರತ ವಿಶ್ವದಲ್ಲೇ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಭಾರತದೊಳಗೆ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಚಿಕ್ಕು ಬೆಳೆಸುವಲ್ಲಿ ಪ್ರಮುಖ ಸ್ಥಾನದಲ್ಲಿವೆ. ಈ ಚಿಕ್ಕು ಗಿಡ ಸಾಮಾನ್ಯವಾಗಿ ಉಷ್ಣ ಮತ್ತು ಕರಾವಳಿ ಪ್ರದೇಶಗಳಲ್ಲಿ ಒಳ್ಳೆ ಇಳುವರಿಯನ್ನು ನೀಡುತ್ತದೆ.
ಸಪೋಡಿಲ್ಲಾ ಮೂಲತಃ ದಕ್ಷಿಣ ಮೆಕ್ಸಿಕೊ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶಗಳಿಗೆ ಸೇರಿದ ಹಣ್ಣು. ನಂತರ ಇದನ್ನು ಉಷ್ಣವಲಯದ ಹವಾಮಾನ ಇರುವ ದೇಶಗಳಿಗೆ ಪರಿಚಯಿಸಲಾಯಿತು. ಭಾರತದಲ್ಲಿ ಇದು ಜನಪ್ರಿಯವಾಗಿದ್ದು, ಈಗ ಮನೆ ತೋಟಗಳಿಂದ ಹಿಡಿದು ಮಾರುಕಟ್ಟೆಗಳಲ್ಲಿ ಎಲ್ಲೆಡೆ ಸುಲಭವಾಗಿ ದೊರೆಯುವ ಹಣ್ಣಾಗಿದೆ.
