ಉದಯವಾಹಿನಿ, ಬೆಂಗಳೂರು: ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಿಂದ ಭಿನ್ನ ಸ್ವರೂಪದ ಪ್ರಚಾರಗಳು ಮತ್ತು ಅಪಪ್ರಚಾರಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಗೃಹಸಚಿವರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಗೃಹ ಇಲಾಖೆಗೆ ಸಂಬಂಧಪಟ್ಟಂತೆ ರಾಜ್ಯ ಮಟ್ಟದ ಅಧಿಕಾರಿಗಳ ಸಭೆಗೆ ಆಗಸ್ಟ್ ತಿಂಗಳಿನಲ್ಲಿ ಸಮಯ ನಿಗದಿಯಾಗುತ್ತಿದ್ದು, ಈ ಕುರಿತು ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಅಪಪ್ರಚಾರಗಳು ಹೆಚ್ಚಾಗಿವೆ.
ಕೆಲವರು ದ್ವೇಷ ಹರಡುವ ಪೋಸ್ಟ್ ಗಳನ್ನು ಹಾಕಿ ಶಾಂತಿ ಭಂಗ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿಯವರು ಕುಟುಂಬದ ಸದಸ್ಯರನ್ನೇ ಮಧ್ಯ ತರುವಂತಹ ಪ್ರಯತ್ನಗಳು ನಡೆದಿವೆ.ಅಂತಹ ಕಿಡಿಗೇಡಿಗಳ ವಿರುದ್ಧ ಈಗಾಗಲೇ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆದಾಗ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹಸಚಿವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!