ಉದಯವಾಹಿನಿ, ಸಂಬಲ್ಪುರ್​ (ಒಡಿಶಾ): ಸಂಬಲ್ಪುರದ ನಗರದ ಈ ಸ್ಥಳೀಯ ಪ್ರದೇಶಕ್ಕೆ ಕಾಲಿಟ್ಟಾಗ ಹಕ್ಕಿಗಳ ಕಲರವ ನಿಮ್ಮನ್ನು ಸೆಳೆಯದೇ ಬಿಡುವುದಿಲ್ಲ. ಎಲ್ಲಿ ಎಂದು ಹುಡುಕಾಡಿದಾಗ ಅದು ಕೇಳಿ ಬರುವುದು ಸುತ್ತಮುತ್ತಲ ಪಾರ್ಕ್​ ಅಥವಾ ಮರಗಳಲ್ಲಿ ಅಲ್ಲ. ಬದಲಾಗಿ ಮನೆಯಲ್ಲಿ. ಗಂಗಾಧರ್​ ಮೆಹರ್​ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್​ ಪ್ರದೋಷ್​ ಕುಮಾರ್​ ಆಚಾರ್ಯ ಅವರ ಮನೆಯಲ್ಲಿ ಈ ಹಕ್ಕಿಗಳ ಚಿಲಿಪಿಲಿ ಕೇಳುತ್ತಿದೆ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಪ್ರವೃತ್ತಿಯಲ್ಲಿ ಪಕ್ಷಿ ಪ್ರೇಮಿಯಾಗಿದ್ದಾರೆ. ಪಕ್ಷಿಗಳಿಗಾಗಿ ತಮ್ಮ ಮನೆಯನ್ನು ಸ್ವರ್ಗ ಮಾಡಿದ್ದು, ವಿಶೇಷವಾಗಿ ಕಣ್ಮರೆಯಾಗಿರುವ ಗುಬ್ಬಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇವರ ಮನೆಯಲ್ಲಿ 100ಕ್ಕೂ ಹೆಚ್ಚು ಪಕ್ಷಿಗಳಿವೆ. 60 ಬುಡ್ಗೇರಿಗರ್, ಸುಮಾರು 20 ಫಿಂಚ್‌ಗಳು ಮತ್ತು ನಾಲ್ಕು ಕಾಕಟಿಯಲ್‌ಗಳು ಇಲ್ಲಿ ಕಾಣಬಹುದಾಗಿದೆ. ಇದಲ್ಲದೇ, ಕಾಡು ಪಕ್ಷಿಗಳನ್ನು ಆಕರ್ಷಿಸಲು ಮನೆಯ ತುಂಬಾ ಹಲವಾರು ಗೂಡುಗಳನ್ನು ನಿರ್ಮಿಸಿದ್ದಾರೆ.

ಇವರ ಮನೆಯನ್ನು ನೋಡಿದರೆ ಅದು ಪಕ್ಷಿಧಾಮ ಎಂಬಂತೆ ಭಾಸವಾಗುತ್ತದೆ. ಈ ಪಕ್ಷಿಗಳ ವಿಚಾರದಲ್ಲಿ ಆಚಾರ್ಯ ಕೂಡ ವಿಶೇಷ ಕಾಳಜಿ ವಹಿಸುತ್ತಾರೆ. ಮಾಲಿನ್ಯ, ನಗರೀಕರಣ ಮತ್ತು ಹವಾಮಾನ ಬದಲಾವಣೆಯಿಂದಾಗಿ ಅನೇಕ ಪಕ್ಷಿ ಪ್ರಭೇದಗಳು ಕ್ಷೀಣಿಸುತ್ತಿರುವ ಈ ಸಮಯದಲ್ಲಿ ಪಕ್ಷಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾವು ಅದರ ರಕ್ಷಣೆಗೆ ಮುಂದಾಗಿದ್ದೇನೆ. ಈಗಾಗಲೇ ಪರಿಸರ ಮಾಲಿನ್ಯ ಮತ್ತು ನೈಸರ್ಗಿಕ ಆವಾಸಸ್ಥಾನಗಳ ನಷ್ಟದಿಂದಾಗಿ ಹಲವು ಪಕ್ಷಿಗಳು ಕಣ್ಮರೆಯಾಗುತ್ತಿವೆ. ನಾವು ಅವುಗಳನ್ನು ರಕ್ಷಿಸದಿದ್ದರೆ, ಜೀವವೈವಿಧ್ಯತೆಯು ಹಾನಿಗೊಳಗಾಗುತ್ತದೆ ಎನ್ನುತ್ತಾರೆ ಆಚಾರ್ಯ. ಆಚಾರ್ಯ ಅವರ ಈ ಪಕ್ಷಿ ಸಂರಕ್ಷಣೆ ಪ್ರಯಾಣ ಆರಂಭವಾಗಿದ್ದು, ಆಕಸ್ಮಿಕವಾಗಿ. ಹಲವು ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯದ ಕಾಶ್ಮೀರಿ ಸಹೋದ್ಯೋಗಿಯೊಬ್ಬರು ಬೇಸಿಗೆ ರಜೆಯಲ್ಲಿ ಆರೈಕೆ ಮಾಡಲು ಎರಡು ಬುಡ್ಗೇರಿಗರ್ ಪಕ್ಷಿಗಳನ್ನು ಉಡುಗೊರೆಯಾಗಿ ನೀಡಿದರು. ಅವುಗಳನ್ನು ಮನೆಗೆ ತಂದಾಗ ಸಣ್ಣ ಪಂಜರ ಸೂಕ್ತವಲ್ಲ ಎಂದು ಅವರು ಅರಿತು ದೊಡ್ಡ ಪಂಜರವನ್ನು ನಿರ್ಮಿಸಿದರು. ಜೊತೆಗೆ ಅದಕ್ಕೆ ಬೇಕಾದ ಸರಿಯಾದ ಗಾಳಿ, ಬೆಳಕು, ಆಹಾರ ಮತ್ತು ನೀರಿನ ಸೌಲಭ್ಯಗಳೊಂದಿಗೆ ಪೂರ್ಣ ಪಕ್ಷಿ ಆವರಣವನ್ನು ನಿರ್ಮಿಸಿದರು. ಪಕ್ಷಿಗಳು ಆರಾಮವಾಗಿ ಬದುಕಲು ಸಾಧ್ಯವಾಗುವಂತೆ ತಾಪಮಾನವನ್ನು ನಿಯಂತ್ರಿಸಲು ವಿಶೇಷ ಕಾಳಜಿ ವಹಿಸಿದರು. ಶೀಘ್ರದಲ್ಲೇ, ಆ ಪಕ್ಷಿಗಳು ಮೊಟ್ಟೆಗಳನ್ನು ಇಟ್ಟಿತು. ಅದರಂತೆ ಪಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗಲಾರಂಭಿಸಿದ್ದು, ಇಂದು ಅದರ ಸಂಖ್ಯೆ 60ಕ್ಕೆ ದಾಟಿದೆ.

Leave a Reply

Your email address will not be published. Required fields are marked *

error: Content is protected !!