ಉದಯವಾಹಿನಿ, ಶಿಮ್ಲಾ (ಹಿಮಾಚಲಪ್ರದೇಶ): ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡ ಮತದಾನ ಮತ್ತು ಕುದುರೆ ವ್ಯಾಪಾರ ತಡೆಯಲು ಹರಿಯಾಣ ಕಾಂಗ್ರೆಸ್ ತನ್ನ ಶಾಸಕರನ್ನು ಹಿಮಾಚಲ ಪ್ರದೇಶಕ್ಕೆ ಕರೆದೊಯ್ದಿದೆ. ‘ಆಪರೇಷನ್​ ಕಮಲ’ ಭೀತಿಯಿಂದ ಎಲ್ಲರನ್ನು ಹೋಟೆಲ್‌ನಲ್ಲಿ ಇಡುವ ಮೂಲಕ ಕಟ್ಟುನಿಟ್ಟಿನ ಕಣ್ಗಾವಲಿಗೆ ಒಳಪಡಿಸಿದೆ.
ರಾಜ್ಯದ ಕೋಟಾದಡಿ ಎರಡು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ. ಅಡ್ಡ ಮತದಾನದ ಸಾಧ್ಯತೆಯ ಬಗ್ಗೆ ಆತಂಕಗೊಂಡ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಈ ವ್ಯವಸ್ಥೆ ಮಾಡಿದೆ. ಶುಕ್ರವಾರ ಸಂಜೆ (ಮಾರ್ಚ್ 13) ಪೊಲೀಸ್ ಬೆಂಗಾವಲಿನಲ್ಲಿ ಕಾಂಗ್ರೆಸ್ ಶಾಸಕರನ್ನು ಶಿಮ್ಲಾಗೆ ಕರೆದೊಯ್ಯಲಾಗಿದೆ. ಈ ಶಾಸಕರು ಕುಫ್ರಿಯ ಹೋಟೆಲ್ ಟ್ವಿನ್ ಟವರ್ಸ್‌ನಲ್ಲಿ ತಂಗಿದ್ದಾರೆ.

ಶಾಸಕರ ಹೋಟೆಲ್​​ಗೆ ಬಿಗಿ ಭದ್ರತೆ: ಕುಫ್ರಿಯ ಹೋಟೆಲ್ ಟ್ವಿನ್ ಟವರ್ಸ್‌ನಲ್ಲಿ ಶಾಸಕರ ವಸತಿಗಾಗಿ ವ್ಯವಸ್ಥೆ ಮಾಡಲಾಗಿದೆ. ಹಿಮಾಚಲ ಪ್ರದೇಶ ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಶಾಸಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೋಟೆಲ್‌ನ ಹೊರಗೆ ಮತ್ತು ಸುತ್ತಮುತ್ತ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯಸಭಾ ಚುನಾವಣೆಯ ಮತದಾನ ದಿನದವರೆಗೂ ಅವರು ಎಲ್ಲರೂ ಅಲ್ಲಿಯೇ ಇರುತ್ತಾರೆ ಎಂದು ತಿಳಿದುಬಂದಿದೆ.

ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದ್ರ ಸಿಂಗ್ ಮತ್ತು ಕಾಂಗ್ರೆಸ್ ಉಸ್ತುವಾರಿಯಾಗಿರುವ ಕರ್ನಾಟಕದ ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಒಟ್ಟು 31 ಕಾಂಗ್ರೆಸ್ ಶಾಸಕರು ಮತ್ತು ನಾಲ್ವರು ಸಂಸದರು ಹಿಮಾಚಲದ ಹೋಟೆಲ್‌ನಲ್ಲಿ ತಂಗಿದ್ದಾರೆ. 37 ಎಂಎಲ್​​ಎಗಳ ಪೈಕಿ ವಿರೋಧ ಪಕ್ಷದ ನಾಯಕ ಭೂಪಿಂದರ್ ಹೂಡಾ, ಮೊಹಮ್ಮದ್ ಇಲಿಯಾಸ್, ವಿನೇಶ್ ಫೋಗಟ್, ಕುಲದೀಪ್ ವತ್ಸ್, ಸರ್ದಾರ್ ಪರಮವೀರ್ ಸಿಂಗ್ ಮತ್ತು ಚಂದ್ರಮೋಹನ್ ಬಿಷ್ಣೋಯ್ ಅವರು ಹಿಮಾಚಲಕ್ಕೆ ಬಂದಿಲ್ಲ.

ಎರಡು ಸ್ಥಾನಗಳ ಮೇಲೆ ಕಣ್ಣು: ಹರಿಯಾಣದಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಮತದಾನ ನಡೆಯಲಿದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸಂಜಯ್ ಭಾಟಿಯಾ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್​​ನಿಂದ ದಲಿತ ನಾಯಕ ಕರಮ್‌ವೀರ್ ಬೋಧ್ ಅವರು ಅಖಾಡದಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸತೀಶ್ ನಂದಲ್ ಅವರ ಪ್ರವೇಶದೊಂದಿಗೆ ಸ್ಪರ್ಧೆ ಕುತೂಹಲಕಾರಿಯಾಗಿದೆ.

ಗೆಲುವಿಗೆ 31 ಮತಗಳು ಬೇಕು: 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ, ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕನಿಷ್ಠ 31 ಮತಗಳು ಬೇಕು. ಪ್ರಸ್ತುತ, ಬಿಜೆಪಿ ಮೂವರು ಸ್ವತಂತ್ರರು ಸೇರಿದಂತೆ 48 ಶಾಸಕರ ಬೆಂಬಲ ಹೊಂದಿದೆ. ಮತ್ತೊಂದೆಡೆ, ಕಾಂಗ್ರೆಸ್ 37 ಸ್ಥಾನಗಳನ್ನು ಹೊಂದಿದೆ. ಸಂಖ್ಯಾಬಲದ ಪ್ರಕಾರ, ಕಾಂಗ್ರೆಸ್​ ಒಂದು ಸ್ಥಾನದಲ್ಲಿ ಗೆಲ್ಲಲಿದೆ. ಅಡ್ಡ ಮತದಾನದ ಅಪಾಯದ ಹಿನ್ನೆಲೆ ರೆಸಾರ್ಟ್ ರಾಜಕಾರಣ ಶುರುವಾಗಿದೆ.

ಕರ್ನಾಟಕಕ್ಕೆ ಬಂದ ಒಡಿಶಾ ಶಾಸಕರು: ಇನ್ನೊಂದು ಬೆಳವಣಿಗೆಯಲ್ಲಿ, ಒಡಿಶಾದ ಕಾಂಗ್ರೆಸ್ 8 ಶಾಸಕರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಅಲ್ಲಿನ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ನಾಲ್ಕನೇ ಸ್ಥಾನಕ್ಕೆ ಯಾರಿಗೂ ಬಹುಮತ ಇಲ್ಲ. ಬಿಜೆಪಿಯ ಆಪರೇಷನ್​ ಕಮಲ ತಪ್ಪಿಸಲು ತನ್ನ ಶಾಸಕರನ್ನು ಕಾಂಗ್ರೆಸ್​ ಕರ್ನಾಟಕಕ್ಕೆ ಕಳುಹಿಸಿದ್ದು, ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುಪರ್ದಿಗೆ ನೀಡಲಾಗಿದೆ. ಎಲ್ಲರನ್ನೂ ಬಿಡದಿಯ ವಂಡರ್​ ಲಾ ರೆಸಾರ್ಟ್​ನಲ್ಲಿ ಇಡಲಾಗಿದೆ.

Leave a Reply

Your email address will not be published. Required fields are marked *

error: Content is protected !!