ಉದಯವಾಹಿನಿ, ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸೆಂಟ್ರಲ್ ಕೋಲ್ಕತ್ತಾದಲ್ಲಿನ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಆರಂಭಕ್ಕೆ ಒಂದು ಗಂಟೆ ಮುನ್ನ ಟಿಎಂಸಿ ಮತ್ತು ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆದಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಮತ್ತು ಬಿಜೆಪಿ ನಾಯಕರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂಸಾಚಾರದ ವೇಳೆ ಗಿರೀಶ್ ಪಾರ್ಕ್ ಪ್ರದೇಶದಲ್ಲಿನ ಸಚಿವ ಶಶಿ ಪಂಜ ಅವರ ನಿವಾಸದ ಮೇಲೆ ಕಲ್ಲುಗಳನ್ನು ತೂರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ರಾಜ್ಯವ್ಯಾಪಿ ಪರಿವರ್ತನಾ ಯಾತ್ರೆ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಆಯೋಜನೆಗೊಂಡಿದ್ದ ಬ್ರಿಗೇಡ್ ಪೆರೇಡ್ ಮೈದಾನದತ್ತ ಬಿಜೆಪಿ ಬೆಂಬಲಿಗರು ಮೆರವಣಿಗೆ ಹೊರಟಿದ್ದರು. ಈ ವೇಳೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ ನಡೆದಿದೆ. ಪ್ರಧಾನಿ ಕಾರ್ಯಕ್ರಮ ಆಯೋಜನೆಯಾಗಿದ್ದ ಪ್ರದೇಶದಿಂದ 5 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಎರಡೂ ಪಕ್ಷದ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಘೋಷಣೆ ಕೂಗಿದ್ದಾರೆ. ಇದರಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸಮಾವೇಶದ ಸ್ಥಳಕ್ಕೆ ಹೋಗುವಾಗ ಬೆಂಬಲಿಗರ ಮೇಲೆ ಟಿಎಂಸಿ ದಾಳಿ ಮಾಡಿದ್ದು, ಯಾವುದೇ ಪ್ರಚೋದನೆ ಇಲ್ಲದೇ ನಮ್ಮ ಮೇಲೆ ಕಲ್ಲುಗಳನ್ನು ಎಸೆಯಲಾಯಿತು. ನಮ್ಮ ಮೇಲೆ ನಿಂದನೆಗಳನ್ನು ಸಹ ಮಾಡಲಾಯಿತು ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಗಲಭೆಯಲ್ಲಿ ಅನೇಕ ವಾಹನಗಳು ಹಾನಿಗೆ ಒಳಗಾಗಿದ್ದು, ಪಕ್ಷದ ನಾಯಕರಾಗಿರುವ ತಮಗನೊ ಘೋಷ್ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣ ನಡೆಸುತ್ತಿದ್ದ ಬೊವಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ಬಪ್ಪದಿತ್ಯಾ ನಸ್ಕಾರ್ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಿಜೆಪಿ ಬೆಂಬಲಿಗರು ಈ ಮೆರವಣಿಗೆ ವೇಳೆ ಸಚಿವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದು, ಇದನ್ನು ಬಿಜೆಪಿ ನಾಯಕರು ಅಲ್ಲಗಳೆದಿದ್ದಾರೆ. ಟಿಎಂಸಿ ಕಾರ್ಯಕರ್ತರೇ ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದಿದ್ದಾರೆ. ಆರಂಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವಾಗ ಪೊಲೀಸರು ಅದನ್ನು ತಡೆಯುವ ಯತ್ನ ನಡೆಸಿಲ್ಲ. ಬಳಿಕ ಅವರು ಬಿಕ್ಕಟ್ಟು ಹೆಚ್ಚಾದಾಗ ಪರಿಸ್ಥಿತಿ ನಿಯಂತ್ರಣಕ್ಕೆ ತಂದು, ಗುಂಪುಗಳನ್ನು ಚದುರಿಸಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ, ವರ್ತಕರು ಆತಂಕಕ್ಕೆ ಒಳಗಾಗಿ ಮಳಿಗೆಗಳ ಬಾಗಿಲು ಮುಚ್ಚಿದರು ಎಂದು ಕೆಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
