ಉದಯವಾಹಿನಿ, ಬೇಸಿಗೆ ಆರಂಭವಾಗುತ್ತಿದ್ದಂತೆ ವಿವಿಧ ರೀತಿಯ ತರಕಾರಿಗಳು ಮತ್ತು ಹಣ್ಣುಗಳು ಲಭ್ಯವಿದೆ. ಆರೋಗ್ಯವಾಗಿರಲು ಮತ್ತು ನಿರ್ಜಲೀಕರಣವನ್ನು ತಡೆಗಟ್ಟಲು ಬೇಸಿಗೆಕಾಲಕ್ಕೆ ತಕ್ಕಂತೆ ನಿಮ್ಮ ಆಹಾರವನ್ನು ಆರಿಸಿಕೊಳ್ಳಬೇಕು. ಕುಂಬಳಕಾಯಿ, ಬೂದು ಕುಂಬಳಕಾಯಿ, ಪಾಲಕ್, ಹಾಗಲಕಾಯಿ ಮತ್ತು ಸೋರೆಕಾಯಿಗಳು ಹೆಚ್ಚಾಗಿ ಸಿಗುತ್ತದೆ. ಆದರೆ ಅನೇಕ ಮಂದಿ ಬೂದು ಕುಂಬಳಕಾಯಿ (Pumpkin) ತಿನ್ನಲಿ ಹಿಂಜರಿಯುತ್ತಾರೆ. ಆದರೆ, ಬೂದು ಕುಂಬಳಕಾಯಿ ತುಂಬಾ ಆರೋಗ್ಯಕರ ತರಕಾರಿ ಆಗಿದೆ. ಇದು ದೇಹವನ್ನು ರೋಗಗಳಿಂದ ದೂರವಿಡಲು ಸಹಾಯ ಮಾಡುವ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ಬೂದು ಕುಂಬಳಕಾಯಿಯಿಂದ ತಯಾರಿಸಿದ ಆಹಾರ ತಿನ್ನುವುದು ಒಳ್ಳೆಯದು. ಒಂದು ವೇಳೆ ಬೂದು ಕುಂಬಳಕಾಯಿ ತಿನ್ನಲು ಇಷ್ಟವಿಲ್ಲದಿದ್ದರೆ, ಅದರಿಂದ ಜ್ಯೂಸ್ ಮಾಡಿ ಸಹ ಕುಡಿಯಲು ಪ್ರಯತ್ನಿಸಿ. ಇದರ ಜ್ಯೂಸ್ ಔಷಧೀಯ ಗುಣಗಳನ್ನು ಹೊಂದಿದ್ದು, ಬೇಸಿಗೆಯಲ್ಲಿ ಇದು ಕುಡಿಯಲು ಸೂಕ್ತವಾಗಿದೆ. ಹಾಗಾದ್ರೆ ಬೂದು ಕುಂಬಳಕಾಯಿಯಿಂದ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ತಿಳಿಯೋಣ ಬನ್ನಿ.
ಬೂದು ಕುಂಬಳಕಾಯಿ ಜ್ಯೂಸ್ನಲ್ಲಿರುವ ಪೋಷಕಾಂಶಗಳು
ಬೇಸಿಗೆಯಲ್ಲಿ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಏಕೆಂದರೆ ಇದು ತುಂಬಾ ಹಗುರವಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ವಿಟಮಿನ್‌ಗಳಲ್ಲಿ ವಿಟಮಿನ್ ಸಿ, ಬಿ 1 ಅಥವಾ ಥಯಾಮಿನ್, ಬಿ 2 ಅಥವಾ ರೈಬೋಫ್ಲಾವಿನ್ ಮತ್ತು ಬಿ 2 ಅಥವಾ ನಿಯಾಸಿನ್ ಸೇರಿವೆ. ಬೂದು ಕುಂಬಳಕಾಯಿಯಲ್ಲಿರುವ ಖನಿಜಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ರಂಜಕಗಳು ಸೇರಿವೆ. ನೀರಿನ ಅಂಶವು ಸರಿಸುಮಾರು 95 ಪ್ರತಿಶತದಷ್ಟಿದೆ. ಆದ್ದರಿಂದ ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ನಿರ್ಜಲೀಕರಣವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ದೇಹವು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೂದು ಕುಂಬಳಕಾಯಿ ಜ್ಯೂಸ್ ಔಷಧೀಯ ಗುಣಗಳ ನಿಧಿ ಎಂದು ತುಂಬಾ ಕಡಿಮೆ ಜನರಿಗೆ ತಿಳಿದಿದೆ. ಪ್ರತಿದಿನ ಒಂದು ಲೋಟ ಬೂದು ಕುಂಬಳಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಇದು ಹೊಟ್ಟೆಯ ಕಿರಿಕಿರಿ ಮತ್ತು ಗ್ಯಾಸ್ಟ್ರಿಕ್ ಅನ್ನು ಸಹ ಶಮನಗೊಳಿಸುತ್ತದೆ.
ಆಯುರ್ವೇದದ ಪ್ರಕಾರ, ಬೂದು ಕುಂಬಳಕಾಯಿ ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ನೀವು ಏನೇ ತಿಂದರೂ ಅಥವಾ ಕುಡಿದರೂ, ಅದು ತರಕಾರಿಗಳಾಗಿರಲಿ ಅಥವಾ ರಸವಾಗಿರಲಿ, ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ. ನಿಮ್ಮ ಹೊಟ್ಟೆಯು ಒಳಗಿನಿಂದ ತಂಪಾಗಿರುತ್ತದೆ. ಇದರ ತಂಪಾಗಿಸುವ ಪರಿಣಾಮದಿಂದಾಗಿ ಬೇಸಿಗೆಯಲ್ಲಿ ಇದನ್ನು ಕುಡಿಯಲು ಶಿಫಾರಸು ಮಾಡಲಾಗುತ್ತದೆ.
