ಉದಯವಾಹಿನಿ, ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಬದೌನ್‌ನಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ನಿಷೇಧಿಸುವ ಜಿಲ್ಲಾಡಳಿತದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಖಾಸಗಿ ವ್ಯಕ್ತಿಯ ಆಸ್ತಿಯಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧವಿಲ್ಲ. ಇದು ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದೆ.
ಬದೌನ್ ನಿವಾಸಿ ಅಲಿಶರ್ ಹಾಗೂ ಇನ್ನೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಬಿ. ಸರಾಫ್ ಮತ್ತು ನ್ಯಾಯಮೂರ್ತಿ ವಿವೇಕ್ ಸರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಖಾಸಗಿ ಆವರಣದಲ್ಲಿ ಧಾರ್ಮಿಕ ಪ್ರಾರ್ಥನಾ ಸಭೆಗಳನ್ನು ನಡೆಸಲು ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ತೀರ್ಪು ನೀಡಿದೆ.
ಪ್ರಾರ್ಥನೆ ಸಲ್ಲಿಸುವುದು ಮುಸ್ಲಿಮರ ಮೂಲಭೂತ ಹಕ್ಕು ಎಂದಿರುವ ನ್ಯಾಯಾಲಯವು, ಅರ್ಜಿದಾರರ ಆವರಣದಲ್ಲಿ ನಡೆಯುವ ಪ್ರಾರ್ಥನೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಬಾರದು. ಸಾರ್ವಜನಿಕ ರಸ್ತೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿದರೆ, ಅಧಿಕಾರಿಗಳು ಮಧ್ಯಪ್ರವೇಶಿಸುವ ಮೂಲಕ ಅದನ್ನು ಪರಿಹರಿಸಬೇಕು. ಈ ಅಧಿಕಾರವನ್ನು ಪೊಲೀಸರು ಉಳಿಸಿಕೊಂಡಿದ್ದಾರೆ ಎಂದು ಪೀಠ ಸ್ಪಷ್ಟಪಡಿಸಿದೆ.
ಬದೌನ್‌ನ ಬೆಹತ್ ಜಾವಿ ಗ್ರಾಮದಲ್ಲಿರುವ ವಕ್ಫ್ ಮಸೀದಿ ರಝಾದಲ್ಲಿ ಅರ್ಜಿದಾರರು ಮತ್ತು ಸಮುದಾಯದ ಇತರ ಸದಸ್ಯರು ನಮಾಜ್ ಮಾಡುವುದರಿಂದ ಯಾವುದೇ ಅಡಚಣೆಯಾಗದಂತೆ ನಿರ್ದೇಶನ ನೀಡುವಂತೆ ಹಾಗೂ ಅವರಿಗೆ ಭದ್ರತೆ ಒದಗಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಖಾತಾ ಸಂಖ್ಯೆ 1081 (ಹಿಂದಿನ ಸಂಖ್ಯೆ 432) ನಿಂದ ಗುರುತಿಸಲ್ಪಟ್ಟ ಅವರ ಖಾಸಗಿ ಆಸ್ತಿಯಲ್ಲಿ ಮಸೀದಿ ಇದೆ. ಹಾಗಾಗಿ ಖಾಸಗಿ ಆಸ್ತಿಯ ಮೇಲೆ ಧಾರ್ಮಿಕ ಪ್ರಾರ್ಥನೆಗಳನ್ನು ನಡೆಸುವುದರ ವಿರುದ್ಧ ಯಾವುದೇ ಕಾನೂನು ನಿಷೇಧವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಮಾರನಾಥ ಫುಲ್ ಗಾಸ್ಪೆಲ್ ಮಿನಿಸ್ಟ್ರೀಸ್ vs ಸ್ಟೇಟ್ ಆಫ್ ಉತ್ತರ ಪ್ರದೇಶ ಮತ್ತು ಇತರ ಪ್ರಕರಣಗಳಲ್ಲಿ ವಿಭಾಗೀಯ ಪೀಠ ನೀಡಿದ ತೀರ್ಪನ್ನು ಪ್ರಸ್ತಾಪಿಸಿದ ಪೀಠ, ಖಾಸಗಿ ಆಸ್ತಿಯಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಅಗತ್ಯವಿಲ್ಲ ಎಂದು ತಿಳಿಸಿತು.
