ಉದಯವಾಹಿನಿ, ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ಕಿಶ್ತ್ವಾರ್ ಜಿಲ್ಲೆಯ ಪಕಲ್ ದುಲ್ ಜಲವಿದ್ಯುತ್ ಯೋಜನೆಯ ಹೆಡ್ ರೇಸ್ ಸುರಂಗ ಒಳಗೆ ಸೋಮವಾರ ರಾತ್ರಿ ಭೂಕುಸಿತ ಸಂಭವಿಸಿದ್ದರಿಂದ ವ್ಯಕ್ತಿ ನಾಪತ್ತೆಯಾಗಿದ್ದು, ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆ ಮತ್ತು ಹಿಮಪಾತದ ಹಿನ್ನೆಲೆಯಲ್ಲಿ ಡ್ಯಾಂಗ್‌ಡೋರೊ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚೆನಾಬ್ ನದಿಯ ಉಪನದಿಯಾದ ಮರುಸುದಾರ್ ನದಿಯಲ್ಲಿ 1000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನು ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿದೆ.

ಮೂಲಗಳ ಪ್ರಕಾರ, ಭೂಕುಸಿತದ ನಂತರ ರಕ್ಷಣಾ ತಂಡಗಳು ಅವಶೇಷಗಳಿಂದ ವ್ಯಕ್ತಿಯೊಬ್ಬ ಮೃತದೇಹವನ್ನು ಹೊರತೆಗೆದಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ, ನಾಪತ್ತೆಯಾದ ವ್ಯಕ್ತಿಗಳೊಂದಿಗೆ ಇದುವರೆಗೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರ ಸ್ಥಿತಿಯ ಬಗ್ಗೆ ಅನಿಶ್ಚಿತತೆ ಇದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಜಿಲ್ಲಾಡಳಿತ, ಪೊಲೀಸರು, ಸೇನೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಅವಶೇಷಗಳಲ್ಲಿ ಸಿಲುಕಿರುವವರನ್ನು ಪತ್ತೆ ಮಾಡಲು ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಮೃತ ಮತ್ತು ನಾಪತ್ತೆಯಾದವರ ಗುರುತು ತಿಳಿದುಬಂದಿಲ್ಲ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಅನಂತ್‌ನಾಗ್-ಕಿಶ್ತ್ವಾರ್ ಲಿಂಕ್ ರಸ್ತೆಯ ಸಿಂಥನ್ ಟಾಪ್‌ನಲ್ಲಿ ಭಾರಿ ಹಿಮಪಾತದ ನಡುವೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ಜೊತೆಗೆ ಸೇನೆಯು ಪ್ರಯಾಣಿಕರನ್ನು ರಕ್ಷಿಸಿದೆ.

ಸೇನಾ ವಕ್ತಾರರ ಪ್ರಕಾರ, ನಾಗರಿಕರಿಗೆ ಬಿಸಿ ಊಟ, ಕುಡಿಯುವ ನೀರು ಮತ್ತು ಆಶ್ರಯವನ್ನು ಒದಗಿಸಲಾಯಿತು, ರಕ್ಷಣಾ ತಂಡಗಳು ಸಿಲುಕಿಕೊಂಡಿದ್ದ ವಾಹನಗಳ ಸಂಚಾರವನ್ನು ಪುನಃಸ್ಥಾಪಿಸಿದವು. ಸಂಚರಿಸಲು ಸಾಧ್ಯವಾದ ವಾಹನಗಳ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ವೈದ್ಯಕೀಯ ತಂಡಗಳು ಅಗತ್ಯವಿರುವವರಿಗೆ ಸಹಾಯ ಮತ್ತು ಅಗತ್ಯ ಔಷಧಿಗಳನ್ನು ನೀಡಿವೆ ಎಂದು ತಿಳಿಸಿದ್ದಾರೆ.

ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರು ಸಾವು(ಪ್ರತ್ಯೇಕ ಘಟನೆ): ನಿರ್ಮಾಣ ಹಂತದ ಗೋಡೆ ಕುಸಿದು ಏಳು ಕಾರ್ಮಿಕರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹರಿಯಾಣದ ಗುರುಗ್ರಾಮದ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ಇತ್ತೀಚಿಗೆ ಸಂಭವಿಸಿತ್ತು. ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣವೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಪೈಕಿ ಏಳು ಕಾರ್ಮಿಕರು ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಮೃತ 7 ಜನರ ಪೈಕಿ ಆರು ಜನರ ಹೆಸರು ಗೊತ್ತಾಗಿದೆ. ಸತೀಶ್ (35), ಭಾಗೀರಥ (50), ಮಿಲನ್, ಶಿವಶಂಕರ್, ಮಂಗಲ್ (32) ಮತ್ತು ಪರಮೇಶ್ವರ್ (52) ಮೃತರೆಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದರು.

ಹರಿಯಾಣ-ರಾಜಸ್ಥಾನ ಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಬೆನ್ನಲ್ಲೇ ಹತ್ತಿರದಲ್ಲಿದ್ದ ರಾಜಸ್ಥಾನದ ಭಿವಾಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಆಗಮಿಸಿ, 1 ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!