ಉದಯವಾಹಿನಿ, ಪುಂಗನೂರಿನಲ್ಲಿ (ಆಂಧ್ರಪ್ರದೇಶ): ಬೈಕ್ ಎಂಜಿನ್‌ನಿಂದ ಹೊರಬಂದ ವಿಷಕಾರಿ ಹೊಗೆ ಸೇವಿಸಿ ಅಜ್ಜ ಹಾಗೂ ಮೂವರು ಮೊಮ್ಮಕ್ಕಳು ನಿದ್ರೆಯಲ್ಲೇ ದುರಂತ ಸಾವು ಕಂಡಿದ್ದಾರೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಂಗನೂರಿನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ರಿಪೇರಿ ಇದ್ದ ದ್ವಿಚಕ್ರ ವಾಹನದ ಎಂಜಿನ್ ಅನ್ನು ಬಿಚ್ಚಿ ಮನೆಯೊಳಗೆ ರಾತ್ರಿಯಿಡೀ ಚಾಲನೆಯಲ್ಲಿ ಇಟ್ಟಿದ್ದು, ಇದರಿಂದ ಬಂದ ವಿಷಕಾರಿ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಮೃತಪಟ್ಟಿರುವ ಮಾಹಿತಿ ಇದೆ. ಪುಂಗನೂರಿನ ತ್ಯಾಗರಾಜು ಬೀದಿಯಲ್ಲಿ ಈ ದುರಂತ ಸಂಭವಿಸಿದ್ದು, ಮೃತರನ್ನು ರಾಮಚಂದ್ರಯ್ಯ, ಅವರ ಮೊಮ್ಮಗ ಕಾರ್ತಿಕ್ ಮತ್ತು ಅವಳಿ ಮೊಮ್ಮಕ್ಕಳು ಚರಿತಾ ಮತ್ತು ಚಂದನಾ ಎಂದು ಗುರುತಿಸಲಾಗಿದೆ. ಮೃತರು ಮುರಳಿ ಮತ್ತು ರೇವತಿ ದಂಪತಿಯ ಮಕ್ಕಳೆಂದು ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮುರಳಿ ಕುಟುಂಬವು ಪುಂಗನೂರಿನ ತ್ಯಾಗರಾಜ ಬೀಧಿಯಲ್ಲಿ ವಾಸಿಸುತ್ತಿದೆ. ಸ್ಥಳೀಯವಾಗಿ ಕ್ಷೌರಿಕ ಅಂಗಡಿ ನಡೆಸುತ್ತಿರುವ ಮುರಳಿ ಅವರ ಬೈಕ್ ನಿನ್ನೆ ದುರಸ್ತಿ ಮಾಡಿಸಿಕೊಂಡಿದ್ದರು. ಬೈಕ್ ಬೋರಿಂಗ್ ಆಗಿದ್ದರಿಂದ ಮೆಕ್ಯಾನಿಕ್ ರಾತ್ರಿಯಿಡೀ ಅದನ್ನು ಆನ್ ಮಾಡಿ ಇಡುವಂತೆ ಸೂಚಿಸಿದ್ದ. ಹಾಗಾಗಿ ಮುರಳಿ ಶನಿವಾರ ರಾತ್ರಿ ಬೈಕ್ ಎಂಜಿನ್ ಅನ್ನು ಆನ್ ಮಾಡಿ ಇಟ್ಟಿದ್ದ ಎಂಬ ಮಾಹಿತಿ ಇದೆ. ಎಂಜಿನ್ ಸ್ಟಾರ್ಟ್ ಮಾಡಿ ಬಾಗಿಲು ಮುಚ್ಚಿದರು. ಮುರಳಿಯ ತಂದೆ ರಾಮಚಂದ್ರ, ಮುರಳಿಯ ಮಗ ಮತ್ತು ಇಬ್ಬರು ಅವಳಿ ಮಕ್ಕಳು ಮನೆಯ ಕೆಳಗಿನ ಕೋಣೆಯ ಬೈಕ್ ಇರಿಸಿದ್ದ ಅದೇ ಕೋಣೆಯಲ್ಲಿ ಮಲಗಿದ್ದರು. ಮುರಳಿ ಮತ್ತು ಅವರ ಪತ್ನಿ ಮನೆಯ ಮೇಲಿನ ಕೋಣೆಯಲ್ಲೇ ಮಲಗಿದ್ದರು. ಮನೆ ಚಿಕ್ಕದಾಗಿದ್ದು, ಸರಿಯಾದ ಗಾಳಿ ಇಲ್ಲದ ಕಾರಣ, ವಿಷಕಾರಿ ಹೊಗೆ ಮನೆಯ ತುಂಬೆಲ್ಲಾ ಹರಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
