ಉದಯವಾಹಿನಿ, ಡೆಹ್ರಾಡೂನ್(ಉತ್ತರಾಖಂಡ): ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡೆಹ್ರಾಡೂನ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಜನಿ ಶುಕ್ಲಾ ಅವರು ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿ, ಮಹತ್ವದ ತೀರ್ಪು ನೀಡಿದ್ದಾರೆ. ಅಪರಾಧಿ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, 2019 ಮತ್ತು 2021ರಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಾಯಿ ಮೇಘಾಲಯ ನಿವಾಸಿಯಾಗಿದ್ದು, ದೂರು ಸಲ್ಲಿಸಿದ್ದರು. 13 ವರ್ಷದ ಮಗಳು ಡೆಹ್ರಾಡೂನ್​ ಪ್ರದೇಶದ ನೆಹರೂ ಕಾಲೊನಿಯ ವಸತಿ ಶಾಲೆಯಲ್ಲಿ ಅಥ್ಯಯನ ಮಾಡುತ್ತಿದ್ದಳು. ಈ ಶಾಲೆಯನ್ನು ನಡೆಸುತ್ತಿದ್ದ ವ್ಯಕ್ತಿ ಮಗಳ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು 2021ರ ಜುಲೈನಲ್ಲಿ ದೂರು ದಾಖಲಿಸಿದ್ದರು.

ಈ ಘಟನೆಯ ಕುರಿತು ಬಾಲಕಿ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಗೆ ಈ ವಿಚಾರ ತಿಳಿಸಿದ್ದರು. ಆದರೆ, ಆಕೆ ಈ ವಿಚಾರದಲ್ಲಿ ಮೌನವಹಿಸಿದ್ದರು. ಮಗಳು ಅಲ್ಲಿದ್ದ ಒಂದೂವರೆ ವರ್ಷದಲ್ಲಿ ಹಲವು ಬಾರಿ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಅಲ್ಲದೇ, ಬಾಲಕಿ ತಾಯಿಗೆ ಕರೆ ಮಾಡಿದಾಗಲೆಲ್ಲಾ ಫೋನ್​ ಅನ್ನು ಸ್ಪೀಕರ್​ ಮೂಡ್​ನಲ್ಲಿ ಇಡಲಾಗಿದ್ದು, ಆಕೆಗೆ ಖಾಸಗಿಯಾಗಿ ಮಾತನಾಡಲು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲದೇ, ಈ ಕುರಿತು ಬಾಲಕಿಗೆ ಸಾವಿನ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ತಾಯಿ ಹೇಳಿಕೆ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದ ಎರಡು ತಿಂಗಳಲ್ಲೇ ಪೊಲೀಸರು ತನಿಖೆ ನಡೆಸಿ 2021ರ ಜುಲೈ 13ರಂದು ಚಾರ್ಚ್‌ಶೀಟ್​ ಸಲ್ಲಿಸಿದ್ದರು.
ಫೆಬ್ರವರಿ 28ರಂದು ಹೊರಬಿದ್ದ ತೀರ್ಪಿನಲ್ಲೂ ಶಿಕ್ಷಕ 15 ವರ್ಷದ ಅಪ್ರಾಪ್ತೆ ವಿರುದ್ಧ ದೌರ್ಜನ್ಯ ಎಸಗಿದ್ದು ಸಾಬೀತಾಗಿದ್ದು, ಈ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ ಎಂದು ಸರ್ಕಾರಿ ವಕೀಲರಾದ ಕಿಶೋರ್​ ಕುಮಾರ್​ ತಿಳಿಸಿದ್ದಾರೆ. ಈ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಏಳರಿಂದ ಎಂಟು ಬಾಲಕಿಯರು ಮತ್ತು ನಾಲ್ವರು ಬಾಲಕರು ವಾಸವಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!