ಉದಯವಾಹಿನಿ, ಹೈದರಾಬಾದ್​ (ತೆಲಂಗಾಣ): ಎರಡೂವರೆ ವರ್ಷದ ಬಾಲಕಿಯೊಬ್ಬಳು ತನ್ನ ಕೊಲೆಯಾದ ತಾಯಿಯ ಪಕ್ಕದಲ್ಲಿ ಇಡೀ ರಾತ್ರಿ ಕಳೆದಿದ್ದಾಳೆ. ನಡೆದ ದುರಂತದ ಅರಿವಿಲ್ಲದೆ ಆಕೆ ಅಳುತ್ತಾ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾಳೆ. ಈ ಭಯಾನಕ ಮತ್ತು ಆಘಾತಕಾರಿ ಘಟನೆ ರಂಗಾರೆಡ್ಡಿ ಜಿಲ್ಲೆಯ ಫಾರೂಕ್‌ನಗರ ಮಂಡಲದ ರಂಗಾರೆಡ್ಡಿಗುಡ ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.

ಪೊಲೀಸರು ಮತ್ತು ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ರಂಗಾರೆಡ್ಡಿಗುಡ ಮೂಲದ 31 ವರ್ಷದ ಮಹಿಳೆ ಕೊಲೆಯಾದಾಕೆ. ಕೌಟುಂಬಿಕ ಕಲಹದಿಂದಾಗಿ ಮೂರುವರೆ ವರ್ಷಗಳ ಹಿಂದೆಯೇ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆಕೆಗೆ ಇಬ್ಬರು ಮಕ್ಕಳು. ಏಳು ವರ್ಷದ ಪುತ್ರ ಮತ್ತು ಎರಡೂವರೆ ವರ್ಷದ ಪುತ್ರಿ ಇದ್ದಾರೆ.

ಗಂಡನಿಂದ ದೂರವಾದ ಬಳಿಕ ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಅವರ ನಡುವೆಯೂ ಭಿನ್ನಾಭಿಪ್ರಾಯ ಉಂಟಾಗಿ, ಬಳಿಕ ಆಕೆ ತನ್ನ ತಾಯಿಯ ಮನೆಗೆ ಮರಳಿದ್ದಳು ಎನ್ನಲಾಗಿದೆ.  ಪ್ರಿಯಕರನು ಶನಿವಾರ ಮಹಿಳೆಯನ್ನು ಸಂಪರ್ಕಿಸಿ ಆಕೆಯ ಮಗನಿಗೆ ಸೈಕಲ್ ಕೊಡಿಸುವುದಾಗಿ ಶಾದ್‌ನಗರಕ್ಕೆ ಬರುವಂತೆ ಸೂಚಿಸಿದ್ದಾನೆ. ಅದರಂತೆ ಮಹಿಳೆ ತನ್ನ ಮಗನೊಂದಿಗೆ ಅಲ್ಲಿಗೆ ಪ್ರಯಾಣಿಸಿದ್ದಾಳೆ. ಆದರೆ, ಆತ ಬಾರದ ಕಾರಣ ನಿರಾಶೆಯಿಂದ ಮನೆಗೆ ಮರಳಿದ್ದಾಳೆ. ಇದರ ನಂತರ ಮತ್ತೆ ಮಹಿಳೆ ಮನೆಯಿಂದ ತನ್ನ ಮಗಳೊಂದಿಗೆ ಹೊರಹೋಗಿದ್ದಾಳೆ.

ಕೃಷಿ ಜಮೀನಿನಲ್ಲಿ ಶವ ಪತ್ತೆ: ಮಹಿಳೆ ಈ ಬಾರಿ ಯಾಕೆ ಮತ್ತು ಯಾರೊಂದಿಗೆ ಹೊರಹೋದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಭಾನುವಾರ ಮುಂಜಾನೆ ರಂಗಾರೆಡ್ಡಿಗುಡಾದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಆಕೆಯ ಶವ ಪತ್ತೆಯಾಗಿದೆ. ಆಕೆಯ ತಲೆಯನ್ನು ದೊಡ್ಡ ಬಂಡೆಗೆ ಜಜ್ಜಲಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿದೆ.  ಶವದ ಪಕ್ಕದಲ್ಲಿ ಪುಟ್ಟ ಮಗು ಅಳುತ್ತಾ ಇಡೀ ರಾತ್ರಿ ಕಳೆದಿದೆ. ಪದೇ ಪದೇ ತನ್ನ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದೆ. ಭಾನುವಾರ ಬೆಳಗ್ಗೆ ದಾರಿಹೋಕರು ಮಗುವಿನ ಅಳು ಕೇಳಿ, ಸ್ಥಳಕ್ಕೆ ತೆರಳಿದಾಗ ಮಹಿಳೆಯ ಕೊಲೆಯಾಗಿದ್ದು ಕಂಡುಬಂದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಮಹಬೂಬ್‌ನಗರದಲ್ಲಿ ಕೊಂದು ರಂಗಾರೆಡ್ಡಿಗುಡದಲ್ಲಿ ಶವ ಎಸೆದರೇ? ಮಹಿಳೆಯ ಕೊಲೆಯ ಹಿಂದೆ ಪ್ರಿಯಕರನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಆಕೆಯನ್ನು ಮಹೆಬೂಬ್​ನಗರದಲ್ಲಿ ಕೊಲೆ ಮಾಡಿ ಶವವನ್ನು ರಂಗಾರೆಡ್ಡಿಗುಡದಲ್ಲಿ ಬಿಸಾಡಿರುವ ಬಗ್ಗೆ ಸುಳಿವು ಸಿಕ್ಕಿದೆ.ವ್ಯಕ್ತಿಯೊಬ್ಬ ಚಿಕ್ಕಮಗುವನ್ನು ತನ್ನ ಬೈಕ್​ ಮೇಲೆ ಕೂರಿಸಿಕೊಂಡು ದೊಡ್ಡ ಚೀಲವನ್ನು ತೆಗೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಇದು ಮಹಿಳೆ ಕೊಲೆಗೆ ಸಂಬಂಧಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!