ಉದಯವಾಹಿನಿ, ಜಮ್ಮು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರತಿಭಟನೆಯ ಬಳಿಕ ಜಮ್ಮು ವಿಶ್ವವಿದ್ಯಾಲಯದ ಎಂಎ ರಾಜ್ಯಶಾಸ್ತ್ರ ಪಠ್ಯದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮೊಹಮ್ಮದ್ ಅಲಿ ಜಿನ್ನಾ, ಸರ್ ಸೈಯದ್ ಅಹ್ಮದ್ ಖಾನ್ ಮತ್ತು ಮೊಹಮ್ಮದ್ ಇಕ್ಬಾಲ್ಗ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಕೈಬಿಡಲಾಗಿದೆ.ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಕುರಿತ ಅಧ್ಯಾಯವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶುಕ್ರವಾರ ಎಪಿವಿಪಿ ಪ್ರತಿಭಟನೆ ನಡೆಸಿತ್ತು. ಈ ಅಧ್ಯಾಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ ಪರಿಷ್ಕೃತ ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಸೇರಿಸಲಾಗಿತ್ತು.
ಈ ಕುರಿತು ಮಾತನಾಡಿರುವ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಲ್ಜಿತ್ ಸಿಂಗ್ ಮಾನ್, ಮಾರ್ಚ್ 22ರಂದು ಅಧ್ಯಾಪಕರು ಮತ್ತು ಇಲಾಖಾ ವ್ಯವಹಾರಗಳ ಸಮಿತಿಯ ಸಭೆ ನಡೆಸಲಾಗಿದೆ. ಒಂದು ವರ್ಷ ಮತ್ತು ಎರಡು ವರ್ಷಗಳ ಸ್ನಾತಕೋತ್ತರ ಕಾರ್ಯಕ್ರಮದ ಕೋರ್ಸ್ನಲ್ಲಿ ಜಿನ್ನಾ, ಸರ್ ಸೈಯದ್ ಅಹ್ಮದ್ ಖಾನ್ ಮತ್ತು ಮೊಹಮ್ಮದ್ ಇಕ್ಬಾಲ್ ಕುರಿತ ವಿಷಯಗಳನ್ನು ತೆಗೆದುಹಾಕಲು ಸರ್ವಾನುಮತದಿಂದ ನಿರ್ಧಾರ ಕೈಗೊಂಡು ಶಿಫಾರಸು ಮಾಡಲಾಗಿದೆ ಎಂದರು.
ಈ ಶಿಫಾರಸುಗಳನ್ನು ಅಧ್ಯಯನ ಮಂಡಳಿಯ ಪರಿಗಣನೆಗೆ ರವಾನಿಸಲಾಗಿದೆ. ಅಧ್ಯಯನ ಮಂಡಳಿ ಮಾರ್ಚ್ 24ರಂದು ಈ ವಿಚಾರದ ಕುರಿತು ಆನ್ಲೈನ್ ಮೂಲಕ ಸಭೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.ಈ ಮೊದಲು ವಿಶ್ವವಿದ್ಯಾಲಯ ಜಿನ್ನಾ ಮತ್ತು ಇತರೆ ಚಿಂತಕರ ವಿಚಾರಗಳು ಸಂಪೂರ್ಣವಾಗಿ ಶೈಕ್ಷಣಿಕವಾಗಿದ್ದು, ಅವು ಯುಜಿಸಿ ಮಾರ್ಗಸೂಚಿಯಂತಿವೆ ಎಂದು ಸಮರ್ಥಿಸಿಕೊಂಡಿತ್ತು.
ಆಧುನಿಕ ಭಾರತೀಯ ರಾಜಕೀಯ ಚಿಂತನೆಯ ಮಾದರಿಯು ಸರ್ ಸೈಯದ್ ಅಹ್ಮದ್ ಖಾನ್, ಮೊಹಮ್ಮದ್ ಇಕ್ಬಾಲ್, ವಿನಾಯಕ ದಾಮೋದರ್ ಸಾವರ್ಕರ್, ಎಂ.ಎಸ್.ಗೋಲ್ವಾಲ್ಕರ್, ಮಹಾತ್ಮ ಗಾಂಧಿ, ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ವಿಭಿನ್ನ ಸೈದ್ಧಾಂತಿಕ ದೃಷ್ಟಿಕೋನಗಳನ್ನು ಪ್ರತಿನಿಧಿಸುವ ಚಿಂತಕರನ್ನು ಒಳಗೊಂಡಿವೆ ಎಂದಿದ್ದರು.
ಇವುಗಳನ್ನು ಬಹು ದೃಷ್ಟಿಕೋನಗಳನ್ನು ಬಿಂಬಿಸಲು ವಿನ್ಯಾಸಗೊಳಿಸಲಾಗಿದೆ. ಈ ವ್ಯಕ್ತಿಗಳಲ್ಲಿ ಹಲವರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ರಾಷ್ಟ್ರೀಯತಾವಾದಿ ನಿಲುವುಗಳನ್ನು ಹೊಂದಿದ್ದರು. ವಿದ್ಯಾರ್ಥಿಗಳಿಗೆ ಐತಿಹಾಸಿಕ ತಿಳುವಳಿಕೆಗೆ ಅವರ ಅಧ್ಯಯನ ಮುಖ್ಯವಾಗಿದೆ ಎಂದು ತಿಳಿಸಿದ್ದರು. ಈ ವಿಷಯಗಳನ್ನು ತಕ್ಷಣಕ್ಕೆ ಕೈಬಿಡಬೇಕು. ಇದು ವಿಭಜನೆ ಮತ್ತು ಎರಡು ದೇಶದ ಸಿದ್ಧಾಂತಕ್ಕೆ ಸಂಬಂಧಿಸಿದ ಅಂಶಗಳಾಗಿದ್ದು ವಿದ್ಯಾರ್ಥಿಗಳ ಬೋಧನೆಗೆ ಸಲ್ಲದು. ಪಠ್ಯಕ್ರಮವನ್ನು ಪರಿಷ್ಕರಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಎಬಿವಿಪಿ ಕಾರ್ಯದರ್ಶಿ ಸನ್ನಕ್ ಶ್ರೀವತ್ಸ್ ಎಚ್ಚರಿಕೆ ನೀಡಿದ್ದರು.
