ಉದಯವಾಹಿನಿ, ಬೆಂಗಳೂರು: ವಿಧಾನಸೌಧ ನೆಲ ಮಹಡಿಯಲ್ಲಿನ ಪಶ್ಚಿಮ ದಿಕ್ಕಿನಲ್ಲಿ ನವೀಕೃತ ನೂತನ ಪ್ರವೇಶ ದ್ವಾರವನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು.‌ ವಿಧಾನಸಭೆ ಸಭಾಂಗಣದ ಪಶ್ಚಿಮ ದ್ವಾರಕ್ಕೆ ಆಕರ್ಷಕವಾದ ಕೆತ್ತನೆಯುಳ್ಳ ನೂತನ ದ್ವಾರವನ್ನು ನಿರ್ಮಿಸಿದಂತೆ ಈಗ ಸರ್ಕಾರದ ಲೋಕೋಪಯೋಗಿ ಇಲಾಖೆ ಮೂಲಕ ವಿಧಾನಸೌಧದ ಸೌಂದರ್ಯಕ್ಕೆ ತಕ್ಕಂತೆ, ಸದರಿ ಕಟ್ಟಡದ ನೆಲಮಹಡಿಯ ಪಶ್ಚಿಮ ದ್ವಾರದ ಕಬ್ಬಿಣದ ಗ್ರಿಲ್‌ನ್ನು ಬದಲಾಯಿಸಿ ಕುಸುರಿ ಕೆತ್ತನೆಯ ಬೀಟೆ ಮರದ ಬಾಗಿಲನ್ನು ಅಳವಡಿಸಲಾಗಿದೆ.
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಕಾಮಗಾರಿಯ ಗುತ್ತಿಗೆದಾರರಾಗಿದ್ದಾರೆ. ಮೈಸೂರು ಅರಮನೆಯಲ್ಲಿನ ಬಾಗಿಲುಗಳ ಮಾದರಿಯ ಕುಸುರಿ ಕೆತ್ತನೆ, ದ್ವಾರದ ಮೇಲ್ಭಾಗದಲ್ಲಿ ರಾಜ್ಯದ ಲಾಂಛನ, ಗಂಡಭೇರುಂಡ ಮತ್ತು ರಾಷ್ಟ್ರದ ಅಶೋಕ ಸ್ತಂಭ ಕಲಾಕೃತಿಗಳನ್ನು ದ್ವಾರಕ್ಕೆ ಅಳವಡಿಸಲಾಗಿದೆ. ಸುಮಾರು 84 ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಗಿಲಿನ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗಿದೆ.‌ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಚಿವರಾದ ಹೆಚ್.ಕೆ. ಪಾಟೀಲ್, ಜಿ‌.ಪರಮೇಶ್ವರ್ ಭಾಗಿಯಾಗಿದ್ದರು.
ಪ್ರವೇಶ ದ್ವಾರ: ವಿಧಾನಸಭೆಯ ಪ್ರವೇಶದ್ವಾರವನ್ನು ಹೊಸದಾಗಿ ವಿನ್ಯಾಸಗೊಳಿಸಿರುವುದಲ್ಲದೇ ಸಭಾಂಗಣದ ಒಳಗಿನ ಗೋಡೆಗಳಲ್ಲಿ ಗಂಡಭೇರುಂಡ ಚಿತ್ರವಿರುವ ಗಡಿಯಾರಗಳನ್ನು 2024ರಲ್ಲಿ ಅಳವಡಿಸಲಾಗಿತ್ತು. ಅಲ್ಲದೇ ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಶಕ್ತಿಸೌಧಕ್ಕೆ ಹೊಸ ಸ್ಪರ್ಶ: ವಿಧಾನಸಭೆಯ ಪ್ರವೇಶ ದ್ವಾರದ ನವೀಕರಣ ಸೇರಿದಂತೆ ಸದನದೊಳಗಡೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಎಲ್ಲಾ ಶಾಸಕರ ಕುರ್ಚಿಗಳ ಮುಂದಿರುವ ಮೇಜುಗಳಿಗೆ ಸುವರ್ಣ ಬಣ್ಣದ ಲೋಹದ ಕಟ್ಟುಗಳನ್ನು ಅಳವಡಿಸಲಾಗಿತ್ತು. 2024ಕ್ಕೂ ಮುನ್ನ ವಿಧಾನಸಭೆಯಲ್ಲಿ ಅಳವಡಿಸಲಾಗಿರುವ ಆಸನಗಳು ಯಾವುದೇ ಅಲಂಕಾರ ಇಲ್ಲದೇ ಸಾಧಾರಣ ಸ್ಥಿತಿಯಲ್ಲಿದ್ದವು.

ಎಐ ಕ್ಯಾಮರಾ ಮೂಲಕ ನಿಗಾ: ವಿಧಾಸಭೆಯಲ್ಲಿ ಆರ್ಟಿಫಿಶಿಯಲ್ ಕ್ಯಾಮರಾ (ಎಐ ಕ್ಯಾಮರಾ) ಅಳವಡಿಸಲಾಗಿದ್ದು, ಎಷ್ಟು ಗಂಟೆಗೆ ಒಳಬರುತ್ತೀರಿ, ಎಷ್ಟು ಗಂಟೆಗೆ ಹೊರಗಡೆ ಹೋಗುತ್ತೀರಿ, ಎಷ್ಟು ಹೊತ್ತು ಸದನದ ಒಳಗಡೆ ಕುಳಿತುಕೊಳ್ಳುತ್ತೀರಿ ಎಂಬುದರ ಸಂಪೂರ್ಣ ಮಾಹಿತಿ ಎಐ ಕ್ಯಾಮರಾಗಳಿಂದ ಸಿಗಲಿದೆ ಎಂದು ಸ್ಪೀಕರ್ ಹೇಳಿದ್ದರು.

ಹೊಸ ಪ್ರಯೋಗ: ವಿಧಾನಮಂಡಲ ಅಧಿವೇಶನಕ್ಕೆ ಶಾಸಕರ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಸಹ ಸ್ಪೀಕರ್ ತೆಗೆದುಕೊಂಡಿದ್ದರು. ಇದರ ಭಾಗವಾಗಿ ಶಾಸಕರಿಗೆ ಉಚಿತ ರುಚಿಕರ ಉಪಹಾರ, ಮಧ್ಯಾಹ್ನದ ಊಟ ಜೊತೆಗೆ ಶಾಸಕರಿಗೆ ಮಧ್ಯಾಹ್ನದ ಕಿರು ನಿದ್ರೆಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ವಿಶೇಷ ಖುರ್ಚಿಯ ವ್ಯವಸ್ಥೆಯನ್ನು ಸಹ 2024ರಿಂದ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!