ಉದಯವಾಹಿನಿ, ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ‘ಬಾಸ್’ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಸುತ್ತ ಹಲವು ವಿವಾದಗಳು ಸೃಷ್ಟಿ ಆಗಿವೆ. ಈ ಸಿನಿಮಾದ ಕಥೆಗೂ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬುದು ಕೆಲವರ ಅಭಿಪ್ರಾಯ. ಹಾಗಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಬಾರದು ಎಂದು ದರ್ಶನ್ ಪರ ವಕೀಲರು ತಕರಾರು ತೆಗೆದಿದ್ದರು. ಆದರೆ ‘ಬಾಸ್’ ಸಿನಿಮಾ ಅಂತಿಮವಾಗಿ ಸೆನ್ಸಾರ್ ಅಗ್ನಿಪರೀಕ್ಷೆಯಲ್ಲಿ ಗೆದ್ದು ಹೊರಬಂದಿದೆ. ವಿ. ಲವ ನಿರ್ದೇಶನದ ಈ ಚಿತ್ರದಲ್ಲಿ ತನುಷ್ ಶಿವಣ್ಣ ಅಭಿನಯಿಸಿದ್ದಾರೆ.
ನಟ ದರ್ಶನ್ ಅವರ ಜೀವನದ ಘಟನೆಗಳಿಗೆ ಸಾಮ್ಯತೆ ಹೊಂದಿದೆ ಎಂಬ ಆರೋಪಗಳ ನಡುವೆಯೂ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ತೋರಿಸಿದೆ. ‘ಬಾಸ್’ ಸಿನಿಮಾದ ಟೀಸರ್ ಹೊರಬಿದ್ದಾಗ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿರುವ ದರ್ಶನ್ ಅವರ ನಿಜ ಜೀವನದ ಕಥೆಯನ್ನೇ ಆಧರಿಸಿರಬಹುದು ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅವರ ಆಪ್ತ ವಲಯದಿಂದ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿವಾದ ಕೇವಲ ಮಾತಿಗೆ ಸೀಮಿತವಾಗದೆ ಕಾನೂನು ಕಟ್ಟೆ ಏರಿತ್ತು. ದರ್ಶನ್ ಪರ ವಕೀಲರು ಚಿತ್ರತಂಡಕ್ಕೆ ಹಾಗೂ ಸೆನ್ಸಾರ್ ಮಂಡಳಿಗೆ ಈ ಮೊದಲೇ ನೋಟಿಸ್ ನೀಡಿದ್ದರು. ಅಷ್ಟೇ ಅಲ್ಲದೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ಖುದ್ದಾಗಿ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ಮನವಿ ಮಾಡಿದ್ದರು ಎಂಬ ವರದಿಗಳು ಹರಿದಾಡಿದ್ದವು.
