ಉದಯವಾಹಿನಿ, ಹೈದರಾಬಾದ್‌: ಐಪಿಎಲ್ 2026 ಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಸ್ಟ್ರೇಲಿಯಾದ ಜ್ಯಾಕ್ ಎಡ್ವರ್ಡ್ಸ್ ಬದಲಿಗೆ ಇಂಗ್ಲೆಂಡ್‌ನ ಡೇವಿಡ್ ಪೇನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 1.5 ಕೋಟಿ ರೂ.ಗೆ ಅವರು ತಂಡವನ್ನು ಸೇರಿಕೊಂಡಿದ್ದಾರೆ.
ಇಂಗ್ಲೆಂಡ್ ಪರ ಒಂದು ಏಕದಿನ ಪಂದ್ಯ ಆಡಿರುವ 35 ವರ್ಷದ ಪೇನ್, 233 ಟಿ20 ಪಂದ್ಯಗಳ ಅನುಭವ ಹೊಂದಿರುವ ಎಡಗೈ ಸೀಮರ್ ಆಗಿದ್ದು, 21.16 ಸರಾಸರಿಯಲ್ಲಿ 304 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಏಕೈಕ ಅಂತರರಾಷ್ಟ್ರೀಯ ಪಂದ್ಯ 2022 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧವಾಗಿತ್ತು. ಪಂದ್ಯದಲ್ಲಿ ಅವರು ಒಂದು ವಿಕೆಟ್ ಪಡೆದಿದ್ದರು.
ಅವರು T20 ಕ್ರಿಕೆಟ್‌ನಲ್ಲಿ ಗ್ಲೌಸೆಸ್ಟರ್‌ಶೈರ್‌ನ ಪ್ರಮುಖ ವಿಕೆಟ್ ಟೇಕರ್‌ ಬೌಲರ್‌ ಆಗಿದ್ದರು. 2024 ರಲ್ಲಿ T20 ಬ್ಲಾಸ್ಟ್‌ನಲ್ಲಿ 17 ಇನ್ನಿಂಗ್ಸ್‌ಗಳಲ್ಲಿ 33 ವಿಕೆಟ್‌ಗಳನ್ನು ಪಡೆದಿದ್ದರು. ಹಂಡ್ರೆಡ್‌ನಲ್ಲಿ ವೆಲ್ಷ್ ಫೈರ್ ಪರವೂ ಆಡಿದ್ದಾರೆ.ಆಸ್ಟ್ರೇಲಿಯಾದ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಗಾಯದ ಕಾರಣದಿಂದಾಗಿ ಈ ಋತುವಿನಿಂದ ಹೊರಗುಳಿದಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ದೃಢಪಡಿಸಿದೆ. ಹರಾಜಿನಲ್ಲಿ ಅವರನ್ನು 3 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು. ಟೂರ್ನಮೆಂಟ್‌ನ ಆರಂಭದಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಕಳೆದುಕೊಂಡಿರುವ ಕಾರಣ ಇಶಾನ್ ಕಿಶನ್ ಅವರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸಲಾಗಿದೆ.

ಹೈದರಾಬಾದ್‌ ತಂಡವು ಶನಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದೊಂದಿಗೆ 19ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲಿದೆ. ಮೊದಲ ಹಂತದಲ್ಲಿ ಒಟ್ಟು 16 ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಈ ಪೈಕಿ 4 ಡಬಲ್‌ ಹೆಡರ್‌(ದಿನಕ್ಕೆ 2 ಪಂದ್ಯ) ಇರಲಿವೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!