ಉದಯವಾಹಿನಿ, ಟೆಹ್ರಾನ್ (ಇರಾನ್): ಸಂಘರ್ಷ ಅಂತ್ಯಕ್ಕಾಗಿ ಇರಾನ್ ಜೊತೆಗೆ ಮಾತುಕತೆ ಸಾಗುತ್ತಿದೆ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ , ತಮ್ಮ ಮೇಲೆ ದಾಳಿ ಮಾಡಿದ ಕ್ರಮಕ್ಕೆ ಇಸ್ರೇಲ್ ಮತ್ತು ಅಮೆರಿಕ ವಿಷಾದಿಸುವವರೆಗೆ ತಮ್ಮ ಪ್ರತೀಕಾರದ ಕ್ರಮಗಳು ಮುಂದುವರೆಯಲಿವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಚೀನಾ ಸಚಿವ ವಾಂಗ್ ಯಿ ಜೊತೆಗೆ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ಅರಘ್ಚಿ ಈ ಮಾತನ್ನು ಹೇಳಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ. ಈ ಪ್ರದೇಶದಲ್ಲಿ ಉಂಟಾಗಿರುವ ಅಸ್ಥಿರತೆಗೆ ಪ್ರಮುಖ ಕಾರಣ ಟೆಲ್ ಅವಿವ್ ಮತ್ತು ವಾಷಿಂಗ್ಟನ್. ಇಸ್ಲಾಮಿಕ್ ರಿಪಬ್ಲಿಕ್ ನಾಗರಿಕರು ಮತ್ತು ಅಲ್ಲಿನ ಸೇನಾ ನೆಲೆಗಳ ಮೇಲೆ ಅವರು ದಾಳಿ ನಡೆಸಿರುವುದೇ ಇಷ್ಟಕ್ಕೆಲ್ಲ ಕಾರಣ. ನಮ್ಮ ಎಲ್ಲಾ ಉದ್ದೇಶಗಳನ್ನು ಸಾಧಿಸುವವರೆಗೆ ಮತ್ತು ಈ ಹಿಂಸಾತ್ಮಕ ಆಕ್ರಮಣಕ್ಕೆ ಶತ್ರುಗಳು ವಿಷಾದಿಸುವರೆಗೆ ಇರಾನ್ ತನ್ನ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುತ್ತದೆ ಎಂದು ಇದೇ ವೇಳೆ, ಘೋಷಿಸಿದ್ದಾರೆ.ಇದೆ ವೇಳೆ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಅವರು, ಇರಾನ್ ತೆಗೆದುಕೊಂಡಿರುವ ಕ್ರಮ ಮತ್ತು ಮುನ್ನೆಚ್ಚರಿಕೆಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿದೆ. ಇರಾನ್‌ನ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಆದರೆ, ಇರಾನ್ ವಿರುದ್ಧ ಆಕ್ರಮಣಕಾರಿ ಕೃತ್ಯಗಳನ್ನು ನಡೆಸಲು ಈ ಜಲಮಾರ್ಗವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತದೆ ಎಂದರು.
ಈ ನಡುವೆ ಟೆಲ್ ಅವೀವ್‌ನಲ್ಲಿರುವ ಇಸ್ರೇಲ್‌ನ ಗುಪ್ತಚರ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ಹೊಸ ದಾಳಿ ಆರಂಭಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಆರ್‌ಜಿಸಿ ಸಾರ್ವಜನಿಕ ಸಂಪರ್ಕ ವಿಭಾಗವೂ, ಐಆರ್‌ಜಿಸಿ ಏರೋಸ್ಪೇಸ್ ಫೋರ್ಸ್ ಕಮಿಕೇಜ್ ಡ್ರೋನ್‌ಗಳ ಜೊತೆಗೆ ಖೇಬರ್ ಶೇಕನ್, ಎಮಾದ್ ಮತ್ತು ಸೆಜ್ಜಿಲ್ ಕ್ಷಿಪಣಿಗಳು ಇಸ್ರೇಲ್‌ನ ಬಹು ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಸಮರ್ಥವಾದ ದಾಳಿ ನಡೆಸಿವೆ. ಈ ಕ್ಷಿಪಣಿಗಳು ಉತ್ತರ ಮತ್ತು ಮಧ್ಯ ಟೆಲ್ ಅವೀವ್‌ನಲ್ಲಿರುವ ಇಸ್ರೇಲ್‌ನ ಗುಪ್ತಚರ ಸೌಲಭ್ಯಗಳನ್ನು ಹಾಗೂ ರಾಮತ್ ಗ್ಯಾನ್ ಮತ್ತು ನೆಗೆವ್‌ನಲ್ಲಿರುವ ಮಿಲಿಟರಿ ವಾಣಿಜ್ಯ ಮತ್ತು ಬೆಂಬಲ ಕೇಂದ್ರಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಬೀರ್‌ಶೆಬಾದಲ್ಲಿರುವ ಇಸ್ರೇಲ್‌ನ ದಕ್ಷಿಣ ಮಿಲಿಟರಿ ಲಾಜಿಸ್ಟಿಕ್ಸ್ ಮತ್ತು ಕಮಾಂಡ್ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ. ಇರಾನ್ ಜೊತೆಗಿನ ಮಾತುಕತೆ ಕುರಿತು ನಿನ್ನೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಸರಿಯಾದ ಜನರೊಂದಿಗೆ ಮಾತುಕತೆ ಉತ್ತಮವಾಗಿ ಸಾಗಿದೆ. ಇದು ಆಡಳಿತ ಬದಲಾವಣೆಯನ್ನು ಸೂಚಿಸುತ್ತದೆ ಎಂದಿದ್ದರು.
