ಉದಯವಾಹಿನಿ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದೂ ಸಿನಿಮಾಗಳಲ್ಲಿ ನಟಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಂಧ್ರ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ‘ಪವರ್ ಸ್ಟಾರ್’ ನಟನೆಗೆ ಇದ್ದ ಕಾನೂನು ಅಡೆತಡೆಗಳು ನಿವಾರಣೆಯಾಗಿವೆ.
ಮಾಜಿ ಐಎಎಸ್ ಅಧಿಕಾರಿ ಜಿ. ವಿಜಯ್ ಕುಮಾ‌ರ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, “ಉಪಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಾಣಿಜ್ಯ ಸಿನಿಮಾಗಳಲ್ಲಿ ನಟಿಸುವುದು ಅಸಂವಿಧಾನಿಕ. ಇದು ಹಿತಾಸಕ್ತಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಇದರಿಂದ ಜನರ ತೆರಿಗೆ ಹಣ ಹಾಗೂ ಸಮಯ ವ್ಯರ್ಥವಾಗುತ್ತದೆ” ಎಂದು ಆರೋಪಿಸಿದ್ದರು. ಅಲ್ಲದೆ, ಪವನ್ ಕಲ್ಯಾಣ್ ಅವರ ಸಿನಿಮಾಗಳಿಗೆ ಸರ್ಕಾರಿ ಸೌಲತ್ತುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಹಳೆಯ ತೀರ್ಪೊಂದನ್ನು ಉಲ್ಲೇಖಿಸಿ ಮಹತ್ವದ ಅಂಶಗಳನ್ನು ತಿಳಿಸಿದೆ.
ಮುಖ್ಯಮಂತ್ರಿ ಅಥವಾ ಸಚಿವರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಂವಿಧಾನದಲ್ಲಿ ಯಾವುದೇ ನಿಷೇಧವಿಲ್ಲ. ಈ ಹಿಂದೆ ದಿವಂಗತ ಎನ್‌.ಟಿ. ರಾಮರಾವ್ ಅವರ ವಿರುದ್ಧವೂ ಇಂತಹುದೇ ಪ್ರಕರಣ ಬಂದಾಗ, ಹೈಕೋರ್ಟ್‌ನ ಪೂರ್ಣ ಪೀಠವು ನಟನೆಗೆ ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ ಎಂದು ತೀರ್ಪು ನೀಡಿತ್ತು. ಅರ್ಜಿದಾರರು ಯಾವುದೇ ಬಲವಾದ ಸಾಕ್ಷ್ಯ ಒದಗಿಸದ ಕಾರಣ ಮತ್ತು ಇದು ರಾಜಕೀಯ ಪ್ರೇರಿತವಾಗಿ ಕಂಡುಬಂದಿದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!