ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಜೆಟ್ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ವಿಧಾನಸಭಾ ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ಸರ್ಕಾರದಿಂದ ಕ್ರಮ ಕೈಗೊಳ್ಳುವಂತೆ ಮಾಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಿದ್ದೇವೆ. ಇ-ಖಾತಾ ವ್ಯವಸ್ಥೆಯಲ್ಲಿ ಫೋನ್ ಪೇ ಮೂಲಕ ಲಂಚ ಪಡೆಯುವುದನ್ನು ಬಹಿರಂಗಪಡಿಸಿದ್ದು, ಆ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರಿನ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಸಾಲದ ಕೂಪ ಸೃಷ್ಟಿಸಿರುವುದರ ಬಗ್ಗೆ ಎಳೆಎಳೆಯಾಗಿ ತಿಳಿಸಿದ್ದೇವೆ. ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡಿದ್ದೇವೆ. ಮುಂದಿನ ವರ್ಷವೂ ಈ ಸರ್ಕಾರ ಸಾಲ ಮಾಡಲಿದೆ. ಕಾಂಗ್ರೆಸ್‌ನವರು ಸಾಲ ಮಾಡುವುದರಲ್ಲಿ ನಿಸ್ಸೀಮರು ಹಾಗೂ ಅಭಿವೃದ್ಧಿಯಲ್ಲಿ ಶೂನ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಜಕ್ಕೂರಿನ ವಾಯುಯಾನ ತರಬೇತಿ ಶಾಲೆಯನ್ನು ಉಳಿಸಿಕೊಳ್ಳಲು ಈ ಸದನದಲ್ಲಿ ಹೋರಾಟ ಮಾಡಿದ್ದೇವೆ. ಇದರ ಪರಿಣಾಮವಾಗಿ ಭೂಮಿ ಉಳಿದಿದೆ. ಟಿ.ನರಸೀಪುರದ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯನ್ನು ಕೂಡ ಉಳಿಸಿದ್ದೇವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇವೆ ಎಂದು ಹೇಳಿದರು.
ಈ ತಿಂಗಳ ಅಂತ್ಯದಲ್ಲಿ ಹಾಗೂ ಏಪ್ರಿಲ್‌ನಲ್ಲಿ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಈ ಚುನಾವಣೆಯನ್ನು ಗೆಲ್ಲಲು ಬಿಜೆಪಿಯ ತಂಡ ಒಂದಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!