ಉದಯವಾಹಿನಿ, ಎರ್ನಾಕುಲಂ (ಕೇರಳಂ): ಆಧುನಿಕ ಎಂಜಿನಿಯರಿಂಗ್​ ಬಳಸಿ ಪ್ರಾಚೀನ ಕಟ್ಟಡವನ್ನು ರಕ್ಷಿಸಲಾಗುತ್ತಿದೆ. ಇಲ್ಲಿನ ಕೊಂತುರುತಿಯ ಸೇಂಟ್ ಜಾನ್ಸ್ ನೆಪೊಮುಸೆನ್ ಚರ್ಚ್ ಬಳಿ ಇರುವ ಹಳೆಯ ಪ್ರಾರ್ಥನಾ ಮಂದಿರವನ್ನು ಅತ್ಯಾಧುನಿಕ ಶಿಫ್ಟಿಂಗ್ ತಂತ್ರಜ್ಞಾನ ಬಳಸಿಕೊಂಡು ಸ್ಥಳಾಂತರಿಸಲಾಗುತ್ತಿದೆ.
ಈ ಪ್ರಾರ್ಥನಾ ಮಂದಿರ ಇರುವ ಜಾಗ ಈಗ ರೈಲ್ವೆ ಹಳಿಗಳ ವಿಸ್ತರಣೆ ಯೋಜನೆಯ ವ್ಯಾಪ್ತಿಗೆ ಬರುತ್ತಿದೆ. ಕಟ್ಟಡವನ್ನು ಧ್ವಂಸ ಮಾಡದೇ, ಐತಿಹಾಸಿಕ ಕುರುಹನ್ನು ಉಳಿಸಿಕೊಳ್ಳುವ ಭಾಗವಾಗಿ ಅದನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನ ನಡೆಸಲಾಗುತ್ತಿದೆ.
2 ಶತಮಾನಗಳ ಹಿಂದೆ ಅಂದರೆ, 1823 ರಲ್ಲಿ ಮುಖ್ಯ ಚರ್ಚ್ ಜೊತೆಗೆ ನಿರ್ಮಿಸಲಾದ ಈ ಪ್ರಾರ್ಥನಾ ಮಂದಿರವು ವಿಶಿಷ್ಟವಾದ ಪೋರ್ಚುಗೀಸ್ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. 15 ಅಡಿ ಎತ್ತರ ಮತ್ತು 6 ಮೀಟರ್ ಅಗಲವಿದೆ. 1992 ರಲ್ಲಿ ಚರ್ಚ್ ಕೆಡವಿ ಪುನರ್ನಿರ್ಮಿಸಿದಾಗಲೂ ಈ ಪ್ರಾರ್ಥನಾ ಮಂದಿರವನ್ನು ಅದರ ಮೂಲ ರೂಪದಲ್ಲೇ ಉಳಿಸಿಕೊಳ್ಳಲಾಗಿತ್ತು.

ಇತ್ತೀಚಿನ ರೈಲ್ವೆ ವಿಸ್ತರಣಾ ಯೋಜನೆಯು ಅದರ ಅಸ್ತಿತ್ವಕ್ಕೆ ಅಡ್ಡಿಯಾಗಿದೆ. ಜನರ ನಂಬಿಕೆಯ ಪ್ರತಿರೂಪವಾಗಿರುವ ಈ ಪ್ರಾರ್ಥನಾ ಕಟ್ಟಡವನ್ನು ಧ್ವಂಸ ಮಾಡುವ ಬದಲಿಗೆ ಅದನ್ನು ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಹರಿಯಾಣ ಕಂಪನಿಯಿಂದ ಕಾರ್ಯಾಚರಣೆ: ಪ್ರಾರ್ಥನಾ ಮಂದಿರವನ್ನು ಸ್ಥಳಾಂತರಿಸುವ ಸವಾಲಿನ ಕಾರ್ಯವನ್ನು ಹರಿಯಾಣ ಮೂಲದ ಶ್ರೀರಾಮ್ ಬಿಲ್ಡಿಂಗ್ ಮತ್ತು ಲಿಫ್ಟಿಂಗ್ ಕಂಪನಿಗೆ ವಹಿಸಲಾಗಿದೆ. ಲ್ಯಾಟರೈಟ್ ಕಲ್ಲುಗಳು ಮತ್ತು ಸಾಂಪ್ರದಾಯಿಕ ಸುರ್ಖಿ ಮಿಶ್ರಣವನ್ನು ಬಳಸಿ ನಿರ್ಮಿಸಲಾದ ಕಟ್ಟಡಕ್ಕೆ ಆಳವಾದ ಅಡಿಪಾಯವಿಲ್ಲ. ಹೀಗಾಗಿ, ಕಟ್ಟಡವನ್ನು ಎತ್ತಲು ತಜ್ಞರ ತಂಡವು 9 ದಿನಗಳನ್ನು ತೆಗೆದುಕೊಂಡಿತು.

ಇಪ್ಪತ್ತೈದು ಜ್ಯಾಕ್‌ಗಳು ಮತ್ತು ಗೇರ್‌ಗಳನ್ನು ಬಳಸಿಕೊಂಡು, ಸಂಪೂರ್ಣ ಕಟ್ಟಡವನ್ನು ಮೇಲಕ್ಕೆತ್ತಲಾಗಿದೆ. ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ, ಕೆಳ ಭಾಗದಲ್ಲಿ ಕಾಂಕ್ರೀಟ್​​ನಿಂದ ಬೆಡ್​ ನಿರ್ಮಿಸಲಾಗಿದೆ. ಈಗನ ಸ್ಥಳದಿಂದ ಇಪ್ಪತ್ತಾರು ಮೀಟರ್ ದೂರದಲ್ಲಿ ಅದನ್ನು ಪುನಸ್ಥಾಪಿಸಲು ಪ್ರಯತ್ನ ಸಾಗಿದೆ. ಈ ಸಂಕೀರ್ಣ ಪ್ರಕ್ರಿಯೆಗೆ ಒಟ್ಟು 6 ಲಕ್ಷ ರೂಪಾಯಿ ತಗುಲಲಿದೆ ಎಂದು ಅಂದಾಜಿಸಲಾಗಿದೆ. 1973 ರಿಂದ ದೇಶಾದ್ಯಂತ ಕಟ್ಟಡಗಳನ್ನು ಎತ್ತುವ ಮತ್ತು ಸ್ಥಳಾಂತರಿಸುವಲ್ಲಿ ಪರಿಣತಿಯನ್ನು ಹೊಂದಿರುವ ವಿಕಾಸ್ ಕುಮಾರ್ ರಾಣಾ ಅವರ ನೇತೃತ್ವದ ತಂಡವು ಈ ಕಾರ್ಯಾಚರಣೆ ಮಾಡುತ್ತಿದೆ.

ಮುಂದಿನ ಭಾನುವಾರದ ಒಳಗೆ ಕಟ್ಟಡವನ್ನು ನಿಗದಿತ ಸ್ಥಳಕ್ಕೆ ವರ್ಗಾಯಿಸಲಾಗುವುದು. ಅದರ ಹೊಸ ಅಡಿಪಾಯದ ಮೇಲೆ ಕಟ್ಟಡವನ್ನು ಮರು ನಿರ್ಮಿಸಲಾಗುವುದು. ಈ ವರ್ಷದ ಪ್ರಾರ್ಥನೆಯನ್ನು ಇದೇ ಪ್ರಾರ್ಥನಾ ಮಂದಿರದಿಂದ ಪ್ರಾರಂಭಿಸಲಾಗುವುದು ಎಂದು ಚರ್ಚ್ ಟ್ರಸ್ಟಿಗಳಾದ ಎಂ.ಸಿ. ಆಂಟನಿ ಮತ್ತು ಜೋಜಿ ಥಾಮಸ್ ಕಾನಟ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!